ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಈಗ ಕೋವಿಡ್ ಸಂಖ್ಯೆ ಇಳಿದಿರುವುದರಿಂದ ಕಳೆದ ವಾರದಿಂದ ಕಾರಿನಲ್ಲಿ ಮಾಸ್ಕ್ ಧರಿಸುವುದರಿಂದ ಹಿಡಿದು ಹಲವು ನಿಯಮಗಳನ್ನ ದೆಹಲಿ ಸರ್ಕಾರ ವಾಪಸ್ಸು ತೆಗೆದುಕೊಂಡಿದೆ.
ಕೊರೋನಾ ಹೆಚ್ಚಳದ ಸಂದರ್ಭದಲ್ಲಿ ಅಂದರೆ ಜನವರಿ ನಾಲ್ಕನೇ ತಾರೀಖಿನಂದು ರಾಷ್ಟ್ರ ರಾಜಧಾನಿಯ ಮೃಗಾಲಯವನ್ನು ಮುಚ್ಚಲಾಗಿತ್ತು. ಎರಡು ತಿಂಗಳ ನಂತರ ಇಂದಿನಿಂದ, ಅಂದರೆ ಮಾರ್ಚ್ ಒಂದನೇ ತಾರೀಖಿನಿಂದ ಪುನರಾರಂಭಗೊಳಿಸಲಾಗಿದೆ. ಈ ಮೂಲಕ ಮೃಗಾಲಯದೊಳಗೆ ಸಂದರ್ಶಕರಿಗೆ ಅನುಮತಿ ನೀಡಲಾಗಿದೆ.
ಮನೆ ಖರೀದಿಸಿದ ಮಹಿಳೆಗೆ ಸಿಕ್ತು ಕಂತೆ ಕಂತೆ ಪ್ರೇಮ ಪತ್ರ…!
ಜನವರಿ ತಿಂಗಳಲ್ಲಿ ಮೃಗಾಲಯಕ್ಕೆ ಸಾರ್ವಜನಿಕರ ಸಂದರ್ಶನವನ್ನು ನಿಷೇಧಿಸಿದ ನಂತರ, ಅದರ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಲಿಂಕ್ ಅನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಲಿಂಕ್ ಅನ್ನು ಮರುಸಕ್ರಿಯಗೊಳಿಸಿದ್ದು ರಾತ್ರಿ ಮೃಗಾಲಯ ತೆರೆದ ಕೆಲವೇ ಗಂಟೆಗಳಲ್ಲಿ, ನಿಖರವಾಗಿ ಹೇಳುವುದಾದರೆ ಬೆಳಗ್ಗೆ 8:30ರ ಸುಮಾರಿಗೆ ಎಲ್ಲಾ 4,000 ಟಿಕೆಟ್‌ಗಳು ಮಾರಾಟವಾದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃಗಾಲಯದ ಹೊರಭಾಗದಲ್ಲಿರುವ ಟಿಕೆಟ್ ಕೌಂಟರ್ ಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಇನ್ನು ಎರಡು ಮೂರು ದಿನಗಳು ಮುಂಚಿತವಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ. 8:30 ರಿಂದ 12:30 ರವರೆಗೆ ಮತ್ತು ಮಧ್ಯಾಹ್ನ 12:30 ರಿಂದ 4:30 ರವರೆಗೆ ಎರಡು ಸ್ಲಾಟ್‌ಗಳಲ್ಲಿ ದಿನಕ್ಕೆ 4,000 ಸಂದರ್ಶಕರನ್ನು ಮಾತ್ರ ಮೃಗಾಲಯದಲ್ಲಿ ಅನುಮತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.