ನವದೆಹಲಿ: ಶಾಸ್ತ್ರಿನಗರದ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಗುರುವಾರ ಮುಂಜಾನೆ ದೆಹಲಿಯ ಶಾಹದಾರದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೃಹತ್ ಬೆಂಕಿಯ ನಂತರ ಉಸಿರುಗಟ್ಟುವಿಕೆಯಿಂದ ಇಬ್ಬರು ಮಕ್ಕಳು ಮತ್ತು ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮನೋಜ್(30) ಮತ್ತು ಅವರ ಪತ್ನಿ ಸುಮನ್(28) ಎಂದು ಗುರುತಿಸಲಾಗಿದೆ, ಜೊತೆಗೆ ಐದು ಮತ್ತು ಮೂರು ವರ್ಷದ ಇಬ್ಬರು ಹುಡುಗಿಯರು ಮೃತಪಟ್ಟಿದ್ದಾರೆ.
ಉಸಿರುಗಟ್ಟುವಿಕೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಮಗೆ ಆಸ್ಪತ್ರೆಯಿಂದ ಮಾಹಿತಿ ಸಿಕ್ಕಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಹದಾರದ ಶಾಸ್ತ್ರಿ ನಗರ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಬೆಳಗ್ಗೆ 5:20ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿದೆ. ಕೂಡಲೇ ದೆಹಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಸ್ಥಳೀಯ ಪೊಲೀಸ್ ತಂಡವು ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು, ಆಂಬ್ಯುಲೆನ್ಸ್ ಗಳು ಮತ್ತು ಪಿಸಿಆರ್ ವ್ಯಾನ್ ಗಳೊಂದಿಗೆ ತ್ವರಿತವಾಗಿ ಸ್ಥಳಕ್ಕೆ ಧಾವಿಸಿವೆ.
ಅಗ್ನಿ ಅವಘಡ ಸಂಭವಿಸಿದ ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಕಾರ್-ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ, ಹೊಗೆ ತ್ವರಿತವಾಗಿ ಇಡೀ ಕಟ್ಟಡದಾದ್ಯಂತ ಹರಡಿದೆ.
ರಸ್ತೆ ಕಿರಿದಾಗಿದ್ದರೂ, ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಮಹಡಿಯಲ್ಲಿ ಹುಡುಕಾಟ ನಡೆಸಲಾಯಿತು. ಮೂವರು ಪುರುಷರು, ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಹೆಡ್ಗೆವಾರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.