ನವದೆಹಲಿ: ರಾಂಗ್ ಸೈಡ್‌ನಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಹೋದ ಮಹಿಳೆಯನ್ನು ಸಂಚಾರಿ ಪೊಲೀಸ್ ಅಧಿಕಾರಿ ತಡೆದು ದೈಹಿಕ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ದೆಹಲಿಯಿಂದ ವರದಿಯಾಗಿದೆ. ಈ ಸಂಬಂಧ ಇಬ್ಬರು ಮಹಿಳೆಯರು ಸೇರಿ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯನ್ನು ರಾಜೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಡಿಯೋಲಿ ರಸ್ತೆ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಸಂಚಾರ ದಟ್ಟಣೆಯನ್ನು ನಿವಾರಿಸಲು ಹೋಗಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್, ರಾಂಗ್ ಸೈಡ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ಸ್ಕೂಟರನ್ನು ತಡೆದಿದ್ದರು. ಅದನ್ನು ಚಲಾಯಿಸುತ್ತಿದ್ದ ಮಹಿಳೆ ಕೋಪಗೊಂಡು, ವಾಗ್ವಾದ ನಡೆಸಿದಳು. ಬಳಿಕ ಅಲ್ಲಿ ಜನ ಸೇರಿದಾಗ, ಪೊಲೀಸ್ ಅಧಿಕಾರಿ ದೈಹಿಕ ಹಲ್ಲೆ ನಡೆಸಿದ್ದಾಗಿ ಆರೋಪಿಸಿದಳು.
ಅಲ್ಲಿ ಸೇರಿದ್ದ ಜನರಲ್ಲಿ ಕೆಲವರು ಮಹಿಳೆಯ ಆರೋಪ ಕೇಳಿಸಿಕೊಂಡು, ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ದೃಶ್ಯವಿರುವ ವಿಡಿಯೋ ಈಗ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸುತ್ತ ಆತನನ್ನು ಬೆನ್ನಟ್ಟುವ ದೃಶ್ಯವೂ ಇದೆ.
ಟ್ರಾಫಿಕ್ ಇನ್ಸ್‌ಪೆಕ್ಟರ್ ರಾಜೇಂದ್ರ ಪ್ರಸಾದ್, ರಾಂಗ್ ಸೈಡ್‌ನಲ್ಲಿ ಬಂದ ಸ್ಕೂಟರ್ ಅನ್ನು ಎಳೆದು ತರಲು ಕ್ರೇನ್‌ಗೆ ಕರೆ ಮಾಡಿದಾಗ, ಅದರಲ್ಲಿದ್ದ ಮಹಿಳೆಯರು ಕಾನ್‌ಸ್ಟೆಬಲ್ ಜತೆಗೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೇ, ಸಂಚಾರಿ ಪೊಲೀಸರು ದೈಹಿಕ ಹಲ್ಲೆ ನಡೆಸಿದರೆಂದು ಆರೋಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.