
ಪಣಜಿ: ಗೋವಾ ಪ್ರವಾಸ ಕ್ಕೆ ಬಂದಿದ್ದ ವೇಳೆ ದೆಹಲಿ ಮೂಲದ ಕುಟುಂಬದ ಮೇಲೆ ಹೋಟೆಲ್ ಸಿಬ್ಬಂದಿ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಅಂಜುನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜತಿನ್ ಶರ್ಮಾ ಎಂದು ಗುರುತಿಸಲಾದ ಕುಟುಂಬದ ಸದಸ್ಯರಲ್ಲಿ ಒಬ್ಬರು Instagram ನಲ್ಲಿ ಸಂಕಷ್ಟ ವಿವರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಜತಿನ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಅವರು ಹೋಟೆಲ್ ಸಿಬ್ಬಂದಿಯ ಬಗ್ಗೆ ವ್ಯವಸ್ಥಾಪಕರಿಗೆ ದೂರು ನೀಡಿದ್ದರು. ನಂತರ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ನಂತರ, ಅವರ ಕುಟುಂಬದ ಮೇಲೆ ಸುಮಾರು ನಾಲ್ಕು ಜನರು ಹಲ್ಲೆ ನಡೆಸಿದ್ದಾರೆ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವಿಷಯ ಬೆಳಕಿಗೆ ಬಂದ ನಂತರ, ಅಂಜುನಾ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಆದರೆ ನಂತರ ನಾಲ್ವರು ಆರೋಪಿಗಳನ್ನು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು.
ಈ ವಿಷಯವು ಉನ್ನತ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಪೊಲೀಸರು ಎಫ್‌ಐಆರ್ ಗೆ ಸೆಕ್ಷನ್ 307 ಸೇರಿಸಿದರು. ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ ನಂತರ ಆರೋಪಿಗಳಲ್ಲಿ ಮೂವರನ್ನು ಮತ್ತೆ ಬಂಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಂಜುನಾದಲ್ಲಿ ಇಂದು ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದರು.