ನವದೆಹಲಿ: ದೆಹಲಿ-ಲೇಹ್ ವಿಮಾನಗಳ ಟಿಕೆಟ್ ದರಗಳು ಈ ಫೆಬ್ರವರಿಯಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಾಮಾನ್ಯವಾಗಿ 3 ಸಾವಿರ ರೂಪಾಯಿ ಇದ್ದ ಟಿಕೆಟ್ ದರವು ಈಗ 10 ಪಟ್ಟು ಹೆಚ್ಚಾಗಿದೆ. ಕಳೆದೆರಡು ದಿನಗಳಲ್ಲಿ ದೆಹಲಿಯಿಂದ ಲೇಹ್‌ಗೆ ವಿಮಾನ ದರವು ಗಗನಕ್ಕೇರಿದೆ ಮತ್ತು ಟಿಕೆಟ್ ದರ 30 ಸಾವಿರ ರೂಪಾಯಿ ಆಗಿದೆ.
ಫೆಬ್ರವರಿ 18 ರಂದು ದೆಹಲಿಯಿಂದ ಲೇಹ್‌ಗೆ ಫ್ಲೈಟ್ ಟಿಕೆಟ್ 33 ಸಾವಿರ ರೂಪಾಯಿ ಆಗಿತ್ತು. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಸಂಸತ್ತಿನಲ್ಲಿ ಇದರ ಕುರಿತು ವಿಷಯವನ್ನು ಪ್ರಸ್ತಾಪಿಸಿದ್ದು ದರ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ.
ಶ್ರೀನಗರ-ಲೇಹ್ ಮಾರ್ಗವು ಲೇಹ್ ಅನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಭಾರೀ ಹಿಮಪಾತದಿಂದಾಗಿ ಹಲವಾರು ದಿನಗಳವರೆಗೆ ಈ ಮಾರ್ಗವನ್ನು ಮುಚ್ಚಲಾಗಿತ್ತು.
ಆದ್ದರಿಂದ, ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಲಡಾಖ್ ತಲುಪಲು ಏಕೈಕ ಮಾರ್ಗವೆಂದರೆ ವಿಮಾನದ ಮೂಲಕ. ಇದೇ ಕಾರಣಕ್ಕೆ ಅನಿವಾರ್ಯವಾಗಿ ದರ ಏರಿಕೆ ಆಗಿದೆ ಎಂದಿದ್ದಾರೆ.
ಆದರೆ ಈ ಸ್ಪಷ್ಟನೆಯನ್ನು ಜನರು ಒಪ್ಪುತ್ತಿಲ್ಲ. ಹಲವಾರು ಮಂದಿ ಈ ದರವನ್ನು ಟೀಕಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಏಕೈಕ ಮಾರ್ಗವೆಂದು ಅದರ ಪ್ರಯೋಜನವನ್ನು ಈ ರೀತಿ ಪಡೆದುಕೊಳ್ಳಬಾರದು ಎಂದು ಕಿಡಿ ಕಾರುತ್ತಿದ್ದಾರೆ.