ಪಶ್ಚಿಮ ದೆಹಲಿಯ ನಂಗ್ಲೋಯ್ನ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಮತ್ತು ಇಬ್ಬರು ಸಹಚರರು ಗರ್ಭಧಾರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ತಲೆದೋರಿದ ಭಿನ್ನಾಭಿಪ್ರಾಯದ ಕಾರಣಕ್ಕೆ ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ವರದಿಯಾಗಿದೆ.
ಸೋನಿ ಎಂದು ಗುರುತಿಸಲಾದ ಯುವತಿ ಕೊಲೆಯಾದವರಾಗಿದ್ದು, ಈಕೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, 6,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಸೋನಿ, ಸಂಜು ಅಥವಾ ಸಲೀಮ್ ಎಂದು ಕರೆಯಲ್ಪಡುವ ತನ್ನ ಗೆಳೆಯನನ್ನು ಒಳಗೊಂಡ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸರ ಪ್ರಕಾರ, ಸಲೀಂ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೋನಿ ಬಗ್ಗೆ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾನೆ.
ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಸಲೀಮ್ನನ್ನು ಮದುವೆಯಾಗಲು ನಿರ್ಧರಿಸಿದ್ದಳು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಆದರೆ ಇದಕ್ಕೆ ವಿರುದ್ದವಿದ್ದ ಸಲೀಂ ಗರ್ಭ ತೆಗೆಸುವಂತೆ ಸೂಚಿಸಿದ್ದಾನೆ. ಈ ವಿಷಯವಾಗಿ ಜೋಡಿ ಆಗಾಗ್ಗೆ ಜಗಳವಾಡುತ್ತಿದ್ದು, ಸೋಮವಾರ, ಸೋನಿ ತನ್ನ ಮನೆಯಿಂದ ಕೆಲವು ವಸ್ತುಗಳನ್ನು ತೆಗೆದುಕೊಂಡು ಸಲೀಮ್ ನನ್ನು ಭೇಟಿಯಾಗಲು ಹೋಗಿದ್ದಳು ಎಂದು ಎನ್ಡಿ ಟಿವಿ ವರದಿ ಮಾಡಿದೆ.
ಸಲೀಂ ಮತ್ತು ಆತನ ಇಬ್ಬರು ಸಹಚರರು ಸೋನಿಯನ್ನು ಹರಿಯಾಣದ ರೋಹ್ಟಕ್ಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಸಲೀಂ ಮತ್ತು ಆತನ ಒಬ್ಬ ಸಹಚರನನ್ನು ಬಂಧಿಸಿದ್ದಾರೆ, ಮತ್ತೊಬ್ಬ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ.