
ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ವರದಿಯಾದ ಘಟನೆಯೊಂದರಲ್ಲಿ ದೆಹಲಿಯ ಆಸ್ಪತ್ರೆಯೊಂದು 15 ವರ್ಷದ ಬಾಲಕಿಯ ಅಂಗಾಂಗಗಳನ್ನು ತೆಗೆದು ದೇಹವನ್ನು ಪಾಲಿಥಿನ್ ಚೀಲಗಳಿಂದ ತುಂಬಿ ಕೊಟ್ಟಿದೆ ಎಂದು ಆರೋಪಿಸಲಾಗಿದೆ.
ಬಾಲಕಿಯ ಕುಟುಂಬದ ಆರೋಪದ ಮೇರೆಗೆ ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕರುಳಿನ ಕಾಯಿಲೆ ಹಿನ್ನಲೆಯಲ್ಲಿ ಜನವರಿ 21 ರಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜನವರಿ 24 ರಂದು ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಆದರೆ ಜನವರಿ 26 ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕುಟುಂಬದವರ ದೂರಿನ ನಂತರ, ಮೃತದೇಹವನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಸಂರಕ್ಷಿಸಲಾಗಿದೆ. ವೈದ್ಯಕೀಯ ಮಂಡಳಿಯು ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ(ಡಿಸಿಪಿ) (ಉತ್ತರ) ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಶವವನ್ನು ತಲುಪಿಸಲು ಹರಸಾಹಸಪಡುತ್ತಿದ್ದರು ಎಂದು ಬಾಲಕಿಯ ಹಿರಿಯ ಸಹೋದರ ಇರ್ಫಾನ್ ಹೇಳಿದ್ದಾರೆ. ಅಂತ್ಯಕ್ರಿಯೆಯ ಅಂಗವಾಗಿ ದೇಹವನ್ನು ಸ್ವಚ್ಛಗೊಳಿಸುತ್ತಿದ್ದಾಗ, ಕುಟುಂಬದ ಮಹಿಳೆಯರು ಹೊಟ್ಟೆಯಲ್ಲಿ ರಂಧ್ರವನ್ನು ಗಮನಿಸಿದರು. ರಂಧ್ರವನ್ನು ಮರೆಮಾಡಲು ಪಾಲಿಥಿನ್ ಹಾಳೆಯನ್ನು ತುಂಬಿಸಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆಗಾಗಿ ಶವವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.