ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಇಲ್ಲದಿದ್ದರೂ ಕೂಡ ಸರ್ಕಾರಿ ಶಾಲೆಗೆ ದಾಖಲಾಗಬಹುದು ಎಂದು ದೆಹಲಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿದ ಬಳಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಬೋರ್ಡ್ ನೇರವಾಗಿ ಹಳೆಯ ಶಾಲೆಯ ವರ್ಗಾವಣೆ ಪತ್ರವನ್ನ ಸರ್ಕಾರಿ ಶಾಲೆಗೆ ರವಾನೆ ಮಾಡಲಿದೆ.
ದೆಹಲಿ ಸರ್ಕಾರದ ಮಹತ್ವದ ನಿರ್ಧಾರವನ್ನ ಘೋಷಿಸಿದ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ, ಕೊರೊನಾದಿಂದಾಗಿ ಅನೇಕರು ತಮ್ಮ ಉದ್ಯೋಗವನ್ನ ಕಳೆದುಕೊಂಡಿದ್ದಾರೆ ಹೀಗಾಗಿ ಶಾಲಾ ಶುಲ್ಕವನ್ನ ಪಾವತಿ ಮಾಡಲೂ ಆಗದಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಷ್ಟದಿಂದ ಬಳಲುತ್ತಿರುವ ಸಾವಿರಾರು ಪೋಷಕರಿಗೆ ರಿಲೀಫ್ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ರು.
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ಮಗು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೊಂದಬಹುದಾಗಿದೆ. ವಿದ್ಯಾರ್ಥಿಗಳ ಬಳಿ ವರ್ಗಾವಣೆ ಪತ್ರ ಇಲ್ಲ ಎಂಬ ಕಾರಣಕ್ಕೆ ದಾಖಲಾತಿಯನ್ನ ನಿಲ್ಲಿಸುವಂತಿಲ್ಲ. ಅನೇಕ ಖಾಸಗಿ ಶಾಲೆಗಳು ಬಾಕಿ ಇರುವ ಶುಲ್ಕ ಪಾವತಿಸದ ಹೊರತು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡೋದಿಲ್ಲ ಎಂದು ಪೋಷಕರಿಗೆ ಒತ್ತಡ ಹೇರುತ್ತಿರುವ ಕಾರಣ ದೆಹಲಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.