
ಸಾಮಾಜಿಕ ಜಾಲತಾಣದಲ್ಲಿ ಚಿತ್ರವಿಚಿತ್ರವಾದ ಖಾದ್ಯ ಪ್ರಯೋಗಗಳ ವಿಡಿಯೋಗಳಿಗೆ ಬರವಿಲ್ಲ. ವೈರಲ್ ಆಗುವ ಆಸೆಯಲ್ಲಿಯೇ ಬಹಳಷ್ಟು ಮಂದಿ ಥರಾವರಿ ಖಾದ್ಯ ಪ್ರಯೋಗಗಳನ್ನು ಮಾಡುತ್ತಾರೆ.
ಭಾರತಾದ್ಯಂತ, ಉತ್ತರ – ದಕ್ಷಿಣ, ಪೂರ್ವ -ಪಶ್ಚಿಮಗಳೆನ್ನದೇ ಅನಧಿಕೃತ ರಾಷ್ಟ್ರೀಯ ಇನ್ಸ್‌ಟಂಟ್ ಆಹಾರವೆಂದೇ ಹೇಳಬಹುದಾದ ಮ್ಯಾಗಿ ನೂಡಲ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ? ನಮ್ಮಲ್ಲಿ ಬಹುತೇಕರು ಈ ಮ್ಯಾಗಿ ನೂಡಲ್ಸ್‌ನೊಂದಿಗೆ ಒಂದಲ್ಲ ಒಂದು ಥರದ ನೆನಪುಗಳನ್ನು ಹೊಂದಿರುವವರೇ ಅಲ್ಲವೇ ?
ಇದೇ ಮ್ಯಾಗಿ ನೂಡಲ್ಸ್ ಇಂದು ದೇಶದ ಬೀದಿ ಬೀದಿಗಳಲ್ಲಿರುವ ಸ್ಟಾಲ್‌ಗಳಲ್ಲಿ ಬಗೆಬಗೆಯ ಅವತಾರದಲ್ಲಿ ಬಿಕರಿಯಾಗುತ್ತಿದೆ. ಮ್ಯಾಗಿ ಲಡ್ಡು, ಮ್ಯಾಗಿ ಮಿಲ್ಕ್‌ಶೇಕ್, ಮ್ಯಾಗಿ ಪಕೋಡ, ರೂಅಫ್ಝಾ ಮ್ಯಾಗಿ, ಓರಿಯೋ ಮ್ಯಾಗಿ, ಫ್ಯಾಂಟಾ ಮ್ಯಾಗಿ ಎಂಬ ಕೇಳಲು ವಿಚಿತ್ರವಾದ ಹೆಸರುಗಳಲ್ಲಿ, ಅಷ್ಟೇ ವಿಚಿತ್ರವಾದ ಪ್ರಯೋಗಗಳಿಗೆ ಮ್ಯಾಗಿ ಒಳಗಾಗಿದೆ.
10 – 20 ರೂ. ಗಳಿಗೆಲ್ಲಾ ಸಿಗುವ ಈ ನೂಡಲ್ಸ್ ಅನ್ನು ಬಿಸಿ ನೀರಿನಲ್ಲಿ ಬೇಯಿಸಿ, ಬೇಕಾದ ತರಕಾರಿಗಳನ್ನು ಹಾಕಿಯೋ, ಚೀಸ್ ಸೇರಿಸಿಯೋ, ಬೆಣ್ಣೆಯಲ್ಲಿ ತರಕಾರಿಗಳನ್ನು ಹದವಾಗಿ ಕರಿದು ಸೇರಿಸಿಯೋ, ಅಥವಾ ಅದಕ್ಕೊಂದು ಮೊಟ್ಟೆ ಒಡೆದು ಹಾಕಿಯೋ ತಮ್ಮದೇ ರುಚಿಗಳನ್ನು ಸೇರಿಸಿ ಮಾರುವ ವರ್ತಕರು, ಇಂಥ ಒಂದು ಪ್ಲೇಟ್ ಮ್ಯಾಗಿ ನೂಡಲ್ಸ್‌ಗೆ 40 – 100 ರೂ.ಗಳವರೆಗೆ ಚಾರ್ಜ್ ಮಾಡುತ್ತಾರೆ.
ಆದರೆ ದೆಹಲಿಯ ಈ ವರ್ತಕ ಮ್ಯಾಗಿಗೆ ಮಟನ್ ಮಸಾಲಾ ಸೇರಿಸಿ, ’ಬಕ್ರೇ ಕೆ ನಕ್ರೇ’ ಎಂಬ ಹೆಸರಿನ ಹೊಸ ಶೈಲಿಯ ಮ್ಯಾಗಿ ನೂಡಲ್ಸ್ ಖಾದ್ಯ ಪರಿಚಯಿಸಿದ್ದಾರೆ. ಪ್ಲೇಟ್ ಒಂದಕ್ಕೆ ಬರೋಬ್ಬರಿ 400ರೂ. ಚಾರ್ಜ್ ಮಾಡಲಾಗುವ ಈ ಖಾದ್ಯದಲ್ಲಿ ಮಟನ್ ಕರ‍್ರಿಯ ಸ್ವಾದಗಳನ್ನು ಮ್ಯಾಗಿ ನೂಡಲ್ಸ್‌ಗೆ ಇಳಿಸಲಾಗಿರುತ್ತದೆ.
“400ರೂ.ನ ಮ್ಯಾಗಿ ! ಇದಕ್ಕೆ ಚಿನ್ನ ಹಾಕುತ್ತಾರೇನು?” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇರ್ ಮಾಡಲಾಗಿದೆ.
ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋಗೆ ಥರಾವರಿ ಪ್ರತಿಕ್ರಿಯೆಗಳು ಬಂದಿವೆ. “400 ರೂ.ಗಳಿಗೆ ನನ್ನ ಒಂದು ತಿಂಗಳ ರೇಷನ್ ಬಂದು ಬೀಳುತ್ತದೆ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಭಾಯ್ ನೀವು ಕೀಮಾ ಹಾಕಿದರೂ ಸಹ ನಾನು ಮ್ಯಾಗಿಗೆ 400ರೂ. ಕೊಡುವುದಿಲ್ಲ,” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಒಂದು ಪೀಸ್ ಮಟನ್ ಹಾಕಿ, ಚಿನ್ನದ ರೇಟ್ ಎಂಬಂತೆ 400ರೂ ಎನ್ನಲಾಗುವ ಇದು ಅದ್ಯಾವ ಕುರಿಯದ್ದೋ,” ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.