ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳಾ ಪೊಲೀಸ್ ಗೆ ಮಾದಕ ದ್ರವ್ಯ ನೀಡಿ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಮುನ್ರಿಕಾ ಪ್ರದೇಶದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ನಿಯೋಜನೆಯಲ್ಲಿದ್ದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮಹಿಳಾ ಕಾನ್ ಸ್ಟೇಬಲ್‌ನ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಲ್ಲದೇ, ನಂತರ ಅವುಗಳನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸಿದ್ದಾನೆ.
ನಗರದ ಓಲ್ಡ್ ನಂಗಲ್ ಪ್ರದೇಶದಲ್ಲಿ 9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಕುರಿತು ನಡೆಯುತ್ತಿರುವ ಗದ್ದಲದ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನಲ್ಲಿ, ನಾನು ಮತ್ತು ಸಬ್ ಇನ್ಸ್‌ಪೆಕ್ಟರ್ ಕೆಲಸದ ಸಮಯದಲ್ಲಿ ಭೇಟಿಯಾಗಿದ್ದೆವು. ಒಂದು ದಿನ ಅವನು ಅವಳನ್ನು ನಗರದ ಮುನ್ರಿಕಾ ಪ್ರದೇಶದ ರೂಮ್ ಗೆ ಕರೆದುಕೊಂಡು ಹೋದನು. ಆತ ಆಕೆಗೆ ಅಲ್ಲಿ ನಿದ್ರಾಜನಕ ಲೇಪಿತ ತಂಪು ಪಾನೀಯವನ್ನು ನೀಡಿದ. ಪಾನೀಯ ಸೇವಿಸಿದ ನಂತರ ಅವಳು ಪ್ರಜ್ಞೆಯನ್ನು ಕಳೆದುಕೊಂಡಳು. ತರುವಾಯ, ಸಬ್ ಇನ್ಸ್ ಪೆಕ್ಟರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಆಕೆಯ ಅಶ್ಲೀಲ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡಿದ್ದಾನೆ. ನಂತರ, ಆತ ಆ ಫೋಟೊಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡುವ ಬೆದರಿಕೆಯೊಡ್ಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಆತ ತನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾನೆ ಮತ್ತು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾ ಪೊಲೀಸ್ ದೂರು ನೀಡಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ದೂರುದಾರರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಖಲಿಸಲಾಗಿದೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ (ದಕ್ಷಿಣ) ಅತುಲ್ ಠಾಕೂರ್ ತಿಳಿಸಿದ್ದಾರೆ.