ಸಾಮಾಜಿಕ ಜಾಲತಾಣವನ್ನು ಸುಳ್ಳು ಸುದ್ದಿ ಹಬ್ಬಿಸಲು ಬಳಸುವ ಗುಂಪುಗಳಲ್ಲೊಂದು ಮಾಡಿದ ಕಿತಾಪತಿಯಿಂದಾಗಿ, ಚುನಾವಣೆಗಳಲ್ಲಿ ಮತದಾನ ಮಾಡದೇ ಇದ್ದಲ್ಲಿ ಚುನಾವಣಾ ಆಯೋಗವು 350 ರೂಪಾಯಿಗಳ ದಂಡ ವಿಧಿಸುವುದಾಗಿ ಹೇಳಿಕೊಂಡು ವದಂತಿ ಹಬ್ಬಿಸಲಾಗಿದೆ.
ಈ ವಿಚಾರವಾಗಿ ತನಿಖೆ ನಡೆಸುತ್ತಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂಧೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಸುದ್ದಿಯಲ್ಲಿ, ಮತದಾನ ಮಾಡದೇ ಇರುವ ಜನರ ಬ್ಯಾಂಕ್ ಖಾತೆಗಳಿಂದ 350 ರೂಪಾಯಿಯನ್ನು ಚುನಾವಣಾ ಆಯೋಗ ಹಿಡಿದುಕೊಳ್ಳಲಿದೆ ಎಂದು ಹೇಳಲಾಗಿತ್ತು.
ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗಿದ್ದ ಚುನಾವಣಾ ಆಯೋಗ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿ, ಇಂಥ ಯಾವುದೇ ಆಲೋಚನೆಯನ್ನು ತಾನು ಮಾಡಿಲ್ಲವೆಂದಿತ್ತು.
ಚುನಾವಣಾ ಆಯೋಗದ ಸ್ಪಷ್ಟನೆಯ ಬಳಿಕವೂ ಈ ವದಂತಿ ಹಬ್ಬುತ್ತಲೇ ಇರುವ ಕಾರಣ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲು ವಿಶೇಷ ಘಟಕವೊಂದಕ್ಕೆ ಹೊಣೆಗಾರಿಕೆ ಕೊಟ್ಟಿದೆ.