ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಪ್ರಿಯಾಂಕಾ ಕಶ್ಯಪ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ಪೇದೆಯು ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕರುಣೆಯೇ ಇಲ್ಲದವರಂತೆ ವರ್ತಿಸುತ್ತಿರುವ ಪೊಲೀಸ್ ಪೇದೆ ವ್ಯಕ್ತಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಪೊಲೀಸ್ ಪೇದೆ ವ್ಯಕ್ತಿಗೆ ಥಳಿಸುತ್ತಿರುವ ಸ್ಥಳದಲ್ಲೇ ಇನ್ನೂ ನಾಲ್ವರು ನಿಂತಿದ್ದಾರೆ. ಮೃತದೇಹವನ್ನು ಕಾರಿನಲ್ಲಿ ತುಂಬಿಕೊಂಡು ಮೀರತ್ನ ಸಮೀಪವಿರುವ ಕಾಲುವೆಯೊಂದರಲ್ಲಿ ಎಸೆಯಲಾಗಿತ್ತು.
ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರು ಹೊಸ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದರಂತೆ. ಆದರೆ 24 ಗಂಟೆ ಕಳೆದರೂ ಸಹ ಅಶೋಕ ನಗರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಇದೀಗ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಹಾಗೂ ಮೃತ ವ್ಯಕ್ತಿಯ ಕುಟುಂಬಸ್ಥರು ನೀಡಿದ್ದ ದೂರನ್ನ ದಾಖಲಿಸಿಕೊಳ್ಳದ ಕಾರಣಕ್ಕೆ ಹೊಸ ಅಶೋಕ ನಗರದ ಎಸ್ಹೆಚ್ಓರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ.