ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತ ಶ್ರೀವಾಸ್ತವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನಿನ್ನೆ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಂಧಿಸಿದಂತೆ 5 ಸುತ್ತಿನ ಮಾತುಕತೆ ನಡೆಸಲಾಗಿತ್ತು. ರ್ಯಾಲಿ ಮಾರ್ಗದ ಬಗ್ಗೆ ರೈತರೇ ಮಾಹಿತಿ ನೀಡಿದ್ದರು. ಕೆಲವು ಷರತ್ತುಗಳೊಂದಿಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಅನುಮತಿ ನೀಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯ ಒಳಗೆ ಟ್ರ್ಯಾಕ್ಟರ್ ರಲ್ಲಿ ಮುಗಿಸಬೇಕಿತ್ತು. ಸಂಘಟನೆಯ ಮುಖಂಡರು ರ್ಯಾಲಿಯನ್ನು ಮುನ್ನಡೆಸಬೇಕು 5000 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳನ್ನು ತರಬಾರದು ಎಂದು ಸೂಚನೆ ನೀಡಲಾಗಿತ್ತು. ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ತರದಂತೆ ಅವರಿಗೆ ತಿಳಿಸಲಾಗಿತ್ತು. ನಮ್ಮ ಎಲ್ಲ ಷರತ್ತುಗಳನ್ನು ರೈತ ಮುಖಂಡರು ಒಪ್ಪಿದ್ದರು ಎಂದು ತಿಳಿಸಿದ್ದಾರೆ.
ಆದರೆ, ಗಣರಾಜ್ಯೋತ್ಸವದ ದಿನ ನಮ್ಮ ಷರತ್ತು ಉಲ್ಲಂಘಿಸಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ. ರ್ಯಾಲಿಯ ವೇಳೆ ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಲಾಗಿದೆ. ಭಾಷಣ ಮಾಡಲ್ಲವೆಂದು ಹೇಳಿ ಭಾಷಣ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯ ಬದಲು ಬೆಳಗ್ಗೆ 8.30 ಕ್ಕೆ ಟ್ರ್ಯಾಕ್ಟರ್ ರ್ಯಾಲಿ ಆರಂಭಿಸಲಾಗಿದೆ. ಘಟನೆಯಲ್ಲಿ 394 ಪೊಲೀಸರು ಗಾಯಗೊಂಡಿದ್ದಾರೆ. ಕೆಲವು ಪೊಲೀಸರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪುರಾತತ್ವ ಸ್ಮಾರಕ ಕೆಂಪುಕೋಟೆಯ ಮೇಲೆ ಕೆಲವರು ಬಾವುಟ ಹಾರಿಸಿದ್ದಾರೆ. ಕೆಂಪುಕೋಟೆಗೆ ಹಾನಿ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದುವರೆಗೆ 25 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ. 19 ಮಂದಿಯನ್ನು ಬಂಧಿಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.