ನವದೆಹಲಿ: ಅಮಿತ್ ಶಾ ಅವರ ನಕಲಿ ವಿಡಿಯೋ ಪ್ರಕರಣದಲ್ಲಿ ಎಕ್ಸ್ ನಲ್ಲಿ ‘ಸ್ಪಿರಿಟ್ ಆಫ್ ಕಾಂಗ್ರೆಸ್’ ನಡೆಸುತ್ತಿರುವ ತೆಲಂಗಾಣದ ಅರುಣ್ ರೆಡ್ಡಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರುಮೀಸಲಾತಿ ತೆಗೆಯಲಾಗುತ್ತದೆ ಎಂದು ಹೇಳಿದಂತೆ ತಿರುಚಿದ ವಿಡಿಯೋ ಹರಿಬಿಟ್ಟ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಮೊದಲ ಬಂಧನ ಆಗಿದೆ. ಆರೋಪಿಯು ‘ಸ್ಪಿರಿಟ್ ಆಫ್ ಕಾಂಗ್ರೆಸ್’ ಎಂಬ ಸಾಮಾಜಿಕ ಮಾಧ್ಯಮ ಖಾತೆಯನ್ನು ನಡೆಸುತ್ತಿದ್ದಾರೆ.
ಸ್ಪಿರಿಟ್ ಆಫ್ ಕಾಂಗ್ರೆಸ್ ಎಕ್ಸ್ ಹ್ಯಾಂಡಲ್ ಪ್ರಕಾರ, ಅರುಣ್ ರೆಡ್ಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಸಾಮಾಜಿಕ ಮಾಧ್ಯಮದ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಅವರು 120 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಈ ನಡುವೆ ಸಾರ್ವಜನಿಕ ಸಭೆಯೊಂದರಲ್ಲಿ ಅಮಿತ್ ಶಾ ಮಾಡಿದ ಭಾಷಣದ ಮಾರ್ಫ್ ಮಾಡಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಬಂಧಿಸಲಾದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ(TPCC) ಸಾಮಾಜಿಕ ಮಾಧ್ಯಮ ಘಟಕದ ಐವರು ಸದಸ್ಯರಿಗೆ ನಗರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಪೆಂಡ್ಯಾಲ ವಂಶಿ ಕೃಷ್ಣ, ಮನ್ನೆ ಸತೀಶ್, ಪೆಟ್ಟಂ ನವೀನ್, ಅಸ್ಮಾ ತಸ್ಲೀಮ್ ಮತ್ತು ಕೋಯಾ ಗೀತಾ ಅವರನ್ನು ಬಂಧಿಸಿದ್ದರು. ಅವರನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಷರತ್ತುಬದ್ಧ ಜಾಮೀನು ನೀಡಿದೆ ಎಂದು ಹೈದರಾಬಾದ್ನ ಸೈಬರ್ ಕ್ರೈಮ್ಸ್ ಉಪ ಪೊಲೀಸ್ ಆಯುಕ್ತ ದಾರಾ ಕವಿತಾ ಅವರು ಹೇಳಿದ್ದಾರೆ.