ಫೇಸ್ಬುಕ್ನಲ್ಲಿ ನಕಲಿ ಖಾತೆ ರಚಿಸಿ ಅಪ್ರಾಪ್ತೆಯೊಂದಿಗೆ ಮದುವೆಯಾಗೋಕೆ ಹೊರಟಿದ್ದ 18 ವರ್ಷದ ಯುವಕನನ್ನ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ನಾಪತ್ತೆಯಾಗಿದ್ದ ಬಾಲಕಿ ಇದೀಗ ಮನೆಗೆ ವಾಪಸ್ಸಾಗಿದ್ದಾಳೆ.
ರಾಜಸ್ಥಾನದ ಅಲ್ವಾರ್ನ ರತ್ನಕಿ ಗ್ರಾಮದ ಶೋಯಬ್ ಖಾನ್ ಅಕ್ಟೋಬರ್ 22ರಂದು ದೆಹಲಿ ತಲುಪಿದ್ದು, ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಬಾಲಕಿ ಬಳಿ ಮದುವೆಯಾಗು ಎಂದು ಪೀಡಿಸಿದ್ದಾನೆ. ಬಳಿಕ ಆಕೆಯನ್ನ ಬಿಹಾರ ಹಾಗೂ ಉತ್ತರ ಪ್ರದೇಶಕ್ಕೆ ಕರೆದೊಯ್ದು ಅಕ್ಟೋಬರ್ 26 ರಂದು ಆಕೆಯನ್ನ ಬಾದರ್ಪುರ ಗಡಿಯಲ್ಲಿ ಆಟೋ ರಿಕ್ಷಾದಲ್ಲಿ ಕೂರಿಸಿ ಪರಾರಿಯಾಗಿದ್ದ.
ಬಾಲಕಿ ತಂದೆ ಅಕ್ಟೋಬರ್ 23 ರಂದು ರಾಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿಯ ಸಾಮಾಜಿಕ ಮಾಧ್ಯಮಗಳ ಖಾತೆಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಆಕೆ ಹೆಚ್ಚು ಬಾರಿ ಎಸ್.ಕೆ ಸಿನ್ಹಾ ಎಂಬ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದಳು ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆಯಲ್ಲಿ ಇದು ಶೋಯಬ್ ಖಾನ್ ರಚಿಸಿದ್ದ ನಕಲಿ ಖಾತೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಶೋಯಬ್ ವಾಸವಿದ್ದ ಗ್ರಾಮಕ್ಕೆ ತೆರಳಿದ ಪೊಲೀಸರು ಆತನನ್ನ ಬಾದರ್ಪುರ ಗಡಿ ಬಳಿ ಬಂಧಿಸಿದ್ದಾರೆ.