ನವದೆಹಲಿ: ಪ್ರಧಾನಿ ಮೋದಿ ಅವರೇ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಕ್ಕೆ ಏಕೆ ಕಳುಹಿಸಿದ್ದೀರಿ ಎನ್ನುವ ಬರಹವಿದ್ದ ಪೋಸ್ಟರ್ ಗಳನ್ನು ಅಂಟಿಸಿದ್ದ 15 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೋವಿಡ್ ಲಸಿಕೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಪೋಸ್ಟರ್ ಗಳನ್ನು ದೆಹಲಿಯ ವಿವಿಧ ಕಡೆ ಅಂಟಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅವರಲ್ಲಿ 15 ಮಂದಿಯನ್ನು ಬಂಧಿಸಲಾಗಿದೆ.
ಗುರುವಾರ ಪೋಸ್ಟರ್ ಗಳನ್ನು ಅಂಟಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ನಂತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ತನಿಖೆ ಕೈಗೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅನ್ವಯ, ಇತರೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ 17 ಎಫ್ಐಆರ್ ದಾಖಲಿಸಲಾಗಿದ್ದು, 15 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತನಾದ ಆರೋಪಿಯೊಬ್ಬ ನೀಡಿರುವ ಮಾಹಿತಿಯಂತೆ ಆತನಿಗೆ 500 ರೂಪಾಯಿ ಕೊಟ್ಟಿದ್ದು ಪೋಸ್ಟರ್ ಹಚ್ಚಲು ಹೇಳಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಈಶಾನ್ಯ ದೆಹಲಿಯಲ್ಲಿ ಮೂರು ಎಫ್‌ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯಲ್ಲಿ ಮೂರು ಎಫ್‌ಐಆರ್ ಮತ್ತು ಹೊರಗಿನ ದೆಹಲಿಯಲ್ಲಿ ಇನ್ನೂ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ನಗರದ ಮಧ್ಯ ಭಾಗ, ರೋಹಿಣಿ ಪ್ರದೇಶ, ಪೂರ್ವ ದೆಹಲಿ, ದ್ವಾರಕಾ ಮೊದಲಾದ ಕಡೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.