ನವದೆಹಲಿ: ಗುಲಾಮಗಿರಿಯ ಸಂಕೇತದಿಂದ ದೇಶಕ್ಕೆ ಮುಕ್ತಿ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನೆ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ ಮಾಡಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ದೇಶದ ನಿರ್ಮಾಣ ಈ ಕರ್ತವ್ಯ ಪಥದ ಮೂಲಕ ಆರಂಭವಾಗಿದೆ. ನಾವು ಸರ್ವ ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಿಯೇ ಸಿದ್ಧ. ದೇಶದ ಯುವಕರಲ್ಲಿ ಗುಲಾಮಿ ಮಾನಸಿಕ ಸ್ಥಿತಿ ತೊಡೆದು ಹಾಕಿದ್ದೇವೆ ಎಂದರು.
ನೌಕಾಸೇನೆಯ ದ್ವಜದಲ್ಲಿಯೂ ಶಿವಾಜಿಯ ಸಂಕೇತ ಇದೆ. ನಾವು ಹಳೆಯ ರಸ್ತೆಗಳ ಹೆಸರುಗಳನ್ನು ಬದಲಾಯಿಸಿದ್ದೇವೆ. ಈ ಬದಲಾವಣೆ ಕೇಂದ್ರ ಸರ್ಕಾರದ ನೀತಿಯಲ್ಲಿಯೂ ಆಗಲಿದೆ. ದೆಹಲಿಯ ರಾಜಪಥ ಬ್ರಿಟಿಷ್ ಅಧಿಕಾರಿಗಳಿಗೆ ಮಾತ್ರ ಇತ್ತು. ದೆಹಲಿಯಲ್ಲಿ ಭಾರತೀಯರು ಗುಲಾಮರಂತೆ ಇದ್ದರು. ಭಾರತಕ್ಕೆ ಇಂದು ಹೊಸ ಪ್ರೇರಣೆ ಶಕ್ತಿ ಸಿಕ್ಕಿದೆ. ಗುಲಾಮಿ ಸಂಕೇತವಾಗಿದ್ದ ರಾಜಪಥ ಕಾಲ ಗರ್ಭಕ್ಕೆ ಸೇರಿದ್ದು, ಬ್ರಿಟಿಷ್ ಅಧಿಕಾರಿಯ ಮೂರ್ತಿಯನ್ನು ತೆಗೆದು ಹಾಕಲಾಗಿದೆ. ಹೊಸ ಭಾರತಕ್ಕೆ ವಿಶ್ವಾಸದ ಬಲ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.
ಕರ್ತವ್ಯ ಪಥ ಲೋಕಾರ್ಪಣೆ ಮಾಡಿರುವುದು ನನ್ನ ಸೌಭಾಗ್ಯ. ಕರ್ತವ್ಯ ಪಥದ ಹೆಸರಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ. ಅವರು ಮಹಾಮಾನವತಾವಾದಿಯಾಗಿದ್ದರು. ಇಂದು ಬೋಸ್ ಪ್ರತಿಮೆ ರಾರಾಜಿಸುತ್ತಿದೆ. ಇಡೀ ವಿಶ್ವದಲ್ಲಿ ಭಾರತವೇ ಮಹಾನ್ ಎಂದು ತಮಿಳು ಕವಿ ಭಾರತಿಯಾರ್ ತಮ್ಮ ಕವಿತೆಯಲ್ಲಿ ವರ್ಣಿಸಿದ್ದಾರೆ ಎಂದರು.