ನವದೆಹಲಿ: ದೆಹಲಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಕೃತ್ಯ ನಡೆದ 24 ಗಂಟೆಯಲ್ಲಿ ಬಂಧಿಸಿದ್ದಾರೆ.
ದಕ್ಷಿಣ ದೆಹಲಿಯ ನೆಬ್ ಸರಾಯ್ ನಲ್ಲಿ ದಂಪತಿ ಹಾಗೂ ಅವರ ಪುತ್ರಿ ಸೇರಿ ಮೂವರನ್ನು ಅಪರಿಚಿತರು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು. ಬೆಳಗಿನ ಜಾವ ಜಾಗಿಂಗ್ ಹೋಗಿದ್ದರಿಂದ ಪುತ್ರ ಪಾರಾಗಿದ್ದ ಎಂದು ಹೇಳಲಾಗಿತ್ತು. ಆದರೆ ತನಿಖೆ ಕೈಗೊಂಡ ಪೊಲೀಸರು ದಂಪತಿಯ ಪುತ್ರನೇ ಕೊಲೆ ಮಾಡಿರುವುದನ್ನು ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.
ತಂದೆ ತನಗೆ ಅವಮಾನ ಮಾಡಿ ಆಸ್ತಿಯನ್ನು ತನ್ನ ಸಹೋದರಿಗೆ ನೀಡುವುದಾಗಿ ಹೇಳಿದ್ದರಿಂದ ಅವರ ಮದುವೆ ವಾರ್ಷಿಕೋತ್ಸವದ ದಿನವೇ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದೆ ಎಂದು ವಿಚಾರಣೆಯ ವೇಳೆ ಪುತ್ರ ಬಾಯಿ ಬಿಟ್ಟಿದ್ದಾನೆ.
ರಾತ್ರಿ ಮಲಗಿದ್ದಾಗ ತಂದೆ, ತಾಯಿ, ಸೋದರಿಯನ್ನು ಕೊಲೆ ಮಾಡಿದ್ದಾನೆ. ಹರ್ಯಾಣ ಮೂಲದ ಮಾಜಿ ಸೈನಿಕ ತಂದೆ ರಾಜೇಶ್(51), ತಾಯಿ ಕೋಮಲ್(46), ಪುತ್ರಿ ಕವಿತಾ(23) ಅವರನ್ನು ಕೊಲೆ ಮಾಡಿ ಅರ್ಜುನ್(20) ಬೆಳಗಿನ ವಾಕಿಂಗ್ ಗೆ ತೆರಳಿದ್ದ. ಮನೆಗೆ ಮರಳಿದಾಗ ಕೊಲೆಯಾಗಿರುವುದರ ಬಗ್ಗೆ ತಿಳಿಸಿದ್ದ. ಮನೆಯಲ್ಲಿ ಯಾವುದೇ ವಸ್ತು ಕಳುವಾಗಿರಲಿಲ್ಲ. ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರಿಗೆ ಹೊರಗಿನವರು ಯಾರೂ ಮನೆಗೆ ಪ್ರವೇಶಿಸಿಲ್ಲ ಎನ್ನುವುದು ಗೊತ್ತಾಗಿದೆ. ಅರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಓದಿಕೊಳ್ಳದ ಪುತ್ರನಿಗೆ ಪದೇ ಪದೇ ಬೈಯುತ್ತಿದ್ದ ರಾಜೇಶ್ ಕುಮಾರ್ ನೆರೆ ಮನೆಯವರ ಮುಂದೆ ಅರ್ಜುನನ್ನು ಥಳಿಸಿದ್ದರು. ಇದರಿಂದ ಕೋಪಗೊಂಡು ಮೂವರನ್ನೂ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.