ಬರೋಬ್ಬರಿ 22 ಬಾರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ದೆಹಲಿಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಂದು ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.
22 ಬಾರಿ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯನ್ನ ನೀರಜ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕರನ್ನ ಮುಖೇಶ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲ ಸಫ್ದರ್ಗಂಜ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದರು.
ಬಂಧನಕ್ಕೊಳಗಾದ ಕಿಶನ್ ಹಾಗೂ ರವಿ ಕೂಡ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇವರ ಸ್ಥಾನಕ್ಕೆ ಮುಖೇಶ್ ಹಾಗೂ ರಾಕೇಶ್ರನ್ನ ನೇಮಿಸಿದ ಕಾರಣ ದ್ವೇಷ ಹುಟ್ಟಿಕ್ಕೊಂಡಿತ್ತು. ಇದೇ ಕಾರಣಕ್ಕೆ ಈ ಎರಡು ಗುಂಪಿನ ನಡುವೆ ಜಗಳ ಏರ್ಪಟ್ಟಿದೆ ಎನ್ನಲಾಗಿದೆ.
ಮುಖೇಶ್ ಹಾಗೂ ರಾಕೇಶ್ ತಮ್ಮ ಶಿಫ್ಟ್ ಮುಗಿಸಿ ತಮ್ಮ ಸ್ನೇಹಿತ ನೀರಜ್ ಜೊತೆ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಈ ಘರ್ಷಣೆ ಸಂಭವಿಸಿದೆ. ಬಾಲಪರಾಧಿ ಜೊತೆಗಿದ್ದ ಕಿಶನ್ ಹಾಗೂ ರವಿ ಈ ಗುಂಪಿನ ನಡುವೆ ಮಾತಿನ ಜಟಾಪಟಿ ನಡೆಸಿದ್ದಾರೆ. ಜಗಳ ತಾರಕಕ್ಕೇರಿದ್ದು, ಎರಡು ಗುಂಪಿನ ನಡುವೆ ಹೊಡೆದಾಟ ಶುರುವಾಗಿದೆ. ನೀರಜ್ ಮಧ್ಯಪ್ರವೇಶಿಸಲು ಯತ್ನಿಸಿದಾಗ ಆತನಿಗೆ ಬರೋಬ್ಬರಿ 22 ಬಾರಿ ಇರಿಯಲಾಗಿದೆ.