ದೆಹಲಿಯ ದಕ್ಷಿಣಪುರಿ ಪ್ರದೇಶದ 20 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನ ಗೆಳತಿಯನ್ನು ಮೆಚ್ಚಿಸಲು ಪ್ರಯತ್ನಿಸಿದ್ದು, ಈಗ ಆತ ಬಂಧನಕ್ಕೊಳಗಾಗುವಂತೆ ಮಾಡಿದೆ. ಯುವಕನನ್ನು ಹರ್ಷ ಎಂದು ಗುರುತಿಸಲಾಗಿದೆ.
ಆದರೆ, ಈ ಫೋಟೋಗಳು ದಕ್ಷಿಣ ದೆಹಲಿ ಜಿಲ್ಲಾ ಪೊಲೀಸ್‌ನ ಎಎಟಿಎಸ್ (ಆ್ಯಂಟಿ ಆಟೋ ಥೆಫ್ಟ್ ಸ್ಕ್ವಾಡ್) ಗಮನಕ್ಕೆ ಬಂದಿದ್ದು, ಅವರು ಕ್ರಮಕ್ಕೆ ಮುಂದಾಗಿದ್ದಾರೆ.
ಹರ್ಷ ಹಾಕಿರುವ ಫೋಟೋದಲ್ಲಿ ಆತ ಅಕ್ರಮ ಬಂದೂಕು ಹಿಡಿದಿರುವುದು ಕಂಡುಬಂದಿದ್ದು, ಅವನ ಉದ್ದೇಶ ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ವ್ಯಕ್ತವಾಗಿತ್ತು. ಪರಿಸ್ಥಿತಿಯ ತೀವ್ರತೆಯನ್ನು ಅರಿತು ಇನ್‌ಸ್ಪೆಕ್ಟರ್ ಉಮೇಶ್ ಯಾದವ್, ಹರ್ಷನನ್ನು ಪತ್ತೆ ಮಾಡಲು ತಂಡವನ್ನು ರಚಿಸಿದ್ದರು.
ಸುಳಿವಿನ ಮೇರೆಗೆ ಎಎಟಿಎಸ್ ಅಂಬೇಡ್ಕರ್ ನಗರದಲ್ಲಿ ಹರ್ಷ ಮತ್ತು ಆತನ ಅಪ್ರಾಪ್ತ ಸಹಚರನನ್ನು ಬಂಧಿಸಿ, ಅವರಿಂದ ಎರಡು ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಎರಡು ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತರುವಾಯ, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25, 54 ಮತ್ತು 59 ರ ಅಡಿಯಲ್ಲಿ ಹರ್ಷನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅಪ್ರಾಪ್ತನ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತಿದೆ.