ಪತ್ನಿ ತನ್ನ ಪ್ರಿಯಕರನ ಜೊತೆ ಮನೆಯಲ್ಲಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಕೋಪಗೊಂಡು ಆಕೆಯ ಪತಿ ಪತ್ನಿಯ ಪ್ರಿಯಕರನನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ ಪೊಲೀಸರು ಸೋಮವಾರ ನೀಡಿದ ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ಇರುವುದನ್ನು ಕಂಡು ಕೋಪದಿಂದ ಆತನನ್ನು ಕೊಂದಿದ್ದಾನೆ. ಆರೋಪಿಯನ್ನು ಅಜ್ಮತ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ಬಂದ ನಂತರ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತ್ತು. ಗಾಯಗೊಂಡ ವ್ಯಕ್ತಿಯನ್ನು ಜಗ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿತಿಕ್ ವರ್ಮಾ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಮೃತ ಯುವಕ ಮತ್ತು ಆರೋಪಿಯ ಪತ್ನಿಗೆ ಸಂಬಂಧವಿತ್ತು ಎನ್ನಲಾಗಿದೆ.
ಆರೋಪಿಯ ಪತ್ನಿ ಕಳೆದ ಕೆಲವು ತಿಂಗಳುಗಳಿಂದ ಮೃತ ರಿತಿಕ್ ವರ್ಮಾ ಜೊತೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಆರೋಪಿ ಮನೆಗೆ ಬಂದಾಗ, ಆತ ತನ್ನ ಪತ್ನಿ ಮತ್ತು ರಿತಿಕ್ ವರ್ಮಾನನ್ನು ಒಟ್ಟಿಗೆ ಕಂಡಿದ್ದಾನೆ. ಇದರಿಂದ ಕೋಪಗೊಂಡ ಅಜ್ಮತ್, ತನ್ನ ಪತ್ನಿ ಮತ್ತು ಯುವಕನನ್ನು ಮನಬಂದಂತೆ ಥಳಿಸಿದ್ದು, ಇದರ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103 (1) ಅನ್ನು ಸೇರಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.