ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ(ಐಜಿಐ) ವಿಮಾನ ನಿಲ್ದಾಣದಲ್ಲಿ ಮಹತ್ವದ ಮಾದಕ ದ್ರವ್ಯ ಪತ್ತೆ ಕಾರ್ಯಾಚರಣೆ ನಡೆದಿದ್ದು, ಕಸ್ಟಮ್ಸ್ ಅಧಿಕಾರಿಗಳು ಸುಮಾರು 29 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯನನ್ನು ಬಂಧಿಸಿದ್ದಾರೆ.
ನವೆಂಬರ್ 9 ರಂದು ಬ್ಯಾಂಕಾಕ್ನಿಂದ ಬಂದ ಶಂಕಿತನನ್ನು ತಡೆಹಿಡಿಯಲಾಯಿತು. ಆತನ ಸಾಮಾನು ಸರಂಜಾಮುಗಳ ವಿವರವಾದ ಶೋಧನೆ ನಡೆಸಿದ್ದು, ಮರೆಮಾಚಲ್ಪಟ್ಟ ಮಾದಕ ದ್ರವ್ಯವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪ್ರಯಾಣಿಕರ ಟ್ರಾಲಿ ಬ್ಯಾಗ್ ನಲ್ಲಿ ಅಡಗಿಸಿಟ್ಟಿದ್ದ 7 ಹಸಿರು ಪಾಲಿಥಿನ್ ಪ್ಯಾಕೆಟ್ಗಳಲ್ಲಿ ಒಟ್ಟು 7.321 ಕೆಜಿ ತೂಕದ(ಪ್ಯಾಕಿಂಗ್ ವಸ್ತುಗಳನ್ನು ಹೊರತುಪಡಿಸಿ ನಿವ್ವಳ ತೂಕ) ಬಿಳಿ ಮಾದಕ ವಸ್ತು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಆರಂಭಿಕ ವಿಶ್ಲೇಷಣೆಯು ವಸ್ತುವನ್ನು ಹೆರಾಯಿನ್ ಎಂದು ದೃಢಪಡಿಸಿದೆ, ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 29.28 ಕೋಟಿ ರೂ. ಆಗಿದೆ. ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.