ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಯಾವುದೇ ಅನುಮತಿಯಿಲ್ಲದೆ ನಿಯಮಗಳಿಗೆ ವಿರುದ್ಧವಾಗಿ ಈ ಉದ್ಯೋಗಿಗಳನ್ನು ನೇಮಕ ಮಾಡಿದ್ದಾರೆ ಎಂಬ ಆರೋಪದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಾರ, ಸ್ವಾತಿ ಮಲಿವಾಲ್ ಅವರು ಸರ್ಕಾರದ ಅನುಮತಿಯಿಲ್ಲದೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿದ್ದರು.
ದೆಹಲಿ ಮಹಿಳಾ ಆಯೋಗ DCW ಕಾಯಿದೆ 1994 ರ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿದೆ ಮತ್ತು ಹಣಕಾಸು ಮತ್ತು ಯೋಜನಾ ಇಲಾಖೆ, GNCTD ಯ ನಿಯಮಗಳನ್ನು ಪಾಲಿಸದೇ ನಿಯಮಗಳಿಗೆ ವಿರುದ್ಧವಾಗಿ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು ಎನ್ನಲಾಗಿದೆ.
ಪ್ರತಿ ಹುದ್ದೆಗೆ ಅರ್ಹತೆಯ ಮಾನದಂಡಗಳನ್ನು ನಿಗದಿಪಡಿಸಿಲ್ಲ. ನೇಮಕಾತಿಗೆ GNCTD ಯಿಂದ ಯಾವುದೇ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. ಹುದ್ದೆಗಳಿಗೆ ಅರ್ಜಿಗಳನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿಲ್ಲ. ಯಾವುದೇ ಹುದ್ದೆಗಳಿಗೆ ಪಾತ್ರ ಮತ್ತು ಜವಾಬ್ದಾರಿಯನ್ನು ನಿಯೋಜಿಸಲಾಗಿಲ್ಲ ಮತ್ತು ಕೆಲವು ಪದಾಧಿಕಾರಿಗಳಿಗೆ ವೇತನವನ್ನು ನಿಗದಿಪಡಿಸಲಾಗಿಲ್ಲ ಎಂದು ಆದೇಶ ತಿಳಿಸಿದೆ.