ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್ನಲ್ಲಿ ಬಚ್ಚಿಟ್ಟು ಸುಮಾರು 3.4 ಕೋಟಿ ರೂಪಾಯಿ ಮೌಲ್ಯದ ಏಳು ಚಿನ್ನದ ಬಾರ್ಗಳನ್ನು ಸಾಗಿಸ್ತಿದ್ದ ಕೀನ್ಯಾದ ಪ್ರಯಾಣಿಕನನ್ನು ದೆಹಲಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ನೈರೋಬಿಯಿಂದ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಆರೋಪಿ ಸೋಮವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದ. ಅನುಮಾನ ಮತ್ತು ಪ್ರೊಫೈಲಿಂಗ್ ಆಧಾರದ ಮೇಲೆ ಅಧಿಕಾರಿಗಳು ವಿವೇಚನೆಯಿಂದ ಕೀನ್ಯಾದ ಪ್ರಯಾಣಿಕನನ್ನು ಫ್ಲೈಟ್ ಗೇಟ್ನಿಂದ ಹಿಂಬಾಲಿಸಿದ್ದರು.
ಪ್ರಯಾಣಿಕನು ವೃತ್ತಿಪರ ವೈದ್ಯನಾಗಿದ್ದು ನಾಲ್ಕು ತಿಂಗಳ ಹಸುಳೆಗೆ ಆಮ್ಲಜನಕ ನೀಡಲು ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಂಡೊಯ್ಯುತ್ತಿದ್ದ. ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್ ಹಿಡಿದಿದ್ದ ಪ್ರಯಾಣಿಕ, ಮಗುವಿನ ಮುಖಕ್ಕೆ ಆಮ್ಲಜನಕ ಮಾಸ್ಕ್ ಅನ್ನು ಜೋಡಿಸಿದ್ದ. ಮಗು ತೀವ್ರವಾಗಿ ಅಸ್ವಸ್ಥಗೊಂಡಿದೆ ಮತ್ತು ಆಮ್ಲಜನಕದ ಪೂರೈಕೆಯ ಅಗತ್ಯವಿದೆ ಎಂದು ಅವನು ನಟಿಸಿದ್ದ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗುವಿನ ಸುರಕ್ಷತೆಗಾಗಿ ಸೂಕ್ತ ಕಾಳಜಿ ವಹಿಸಿ ವೈಯಕ್ತಿಕ ಶೋಧ ನಡೆಸಿದಾಗ ಸುಮಾರು 7 ಕೆ.ಜಿ. ತೂಕದ ಏಳು ಬಾರ್ ಚಿನ್ನಾಭರಣ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ಮಗು ಸದೃಢವಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.