ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಹೈದರಾಬಾದ್ ಕರ್ನಾಟಕ ವೃಂದಕ್ಕೆ 7, ಉಳಿಕೆ ಮೂಲ ವೃಂದದ 25 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಕ ವ್ಯವಸ್ಥಾಪಕರು, ಸ್ವಾಗತಕಾರರು, ಕಿಚನ್ ಮೇಟ್, ಪ್ಯೂನ್ ಕಂ ವಾಚ್ ಮೆನ್, ಗಾರ್ಡನರ್ ಕಂ ಸ್ವೀಪರ್ ಸೇರಿ ಒಟ್ಟು 32 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸಬೇಕಿದೆ.
ಫೆಬ್ರವರಿ 22 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 7 ಶುಲ್ಕ ಪಾವತಿಗೆ ಕೊನೆಯ ದಿನವಾಗಿದ್ದು, ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕಿದೆ. ಮಾಹಿತಿಗಾಗಿ www.karnatakabhavana.karnataka.gov.in ಗಮನಿಸಬಹುದಾಗಿದೆ.