ನವದೆಹಲಿ: ಕೊರೋನಾ ಆತಂಕದ ಹೊತ್ತಲ್ಲೇ ಕಾಣಿಸಿಕೊಂಡ ಬ್ಲಾಕ್, ವೈಟ್ ಮತ್ತು ಯೆಲ್ಲೋ ಫಂಗಸ್ ಪರಿಣಾಮಗಳು ಬೆಚ್ಚಿಬೀಳಿಸುವಂತಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ದೆಹಲಿಯಲ್ಲಿ ಶಿಲೀಂಧ್ರ ರೋಗದ ಪರಿಣಾಮದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವೈಟ್ ಫಂಗಸ್ ಕರುಳಿಗೆ ರಂಧ್ರ ಕೊರೆದರೆ, ಬ್ಲಾಕ್ ಫಂಗಸ್ ಗ್ಯಾಂಗ್ರೀನ್ ಉಂಟುಮಾಡುತ್ತದೆ.
ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪು, ಬಿಳಿ ಮತ್ತು ಹಳದಿ ಫಂಗಸ್ ಗಳ ಅಡ್ಡಪರಿಣಾಮದ ಕುರಿತಾಗಿ ದೆಹಲಿ ಗಂಗಾರಾಮ್ ಆಸ್ಪತ್ರೆಯ ವೈದ್ಯ ಡಾ. ಅನಿಲ್ ಅರೋರಾ ಅವರು ಮಾಹಿತಿ ನೀಡಿದ್ದಾರೆ. ಮಹಿಳಾ ರೋಗಿಯೊಬ್ಬರ ಕರುಳಿನಲ್ಲಿ ವೈಟ್ ಫಂಗಸ್ ಹಲವು ರಂಧ್ರಗಳನ್ನು ಉಂಟುಮಾಡಿದೆ. ಮಹಿಳೆಯ ಕರುಳಿನಲ್ಲಿ ಹೆಚ್ಚಿನ ಸಂಖ್ಯೆಯ ರಂಧ್ರಗಳು ಕಂಡುಬಂದಿರುವುದು ಇದೇ ಮೊದಲ ಪ್ರಕರಣವಾಗಿದೆ.
ಹೊಟ್ಟೆನೋವು, ವಾಂತಿ, ಮಲಬದ್ಧತೆಯಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಯ ಕರುಳಿನಲ್ಲಿ ವೈಟ್ ಫಂಗಸ್ ರಂಧ್ರ ಮಾಡಿದೆ. ಸಣ್ಣಕರುಳಿನಲ್ಲಿ ಬ್ಲಾಕ್ ಫಂಗಸ್ ನಿಂದ ಗ್ಯಾಂಗ್ರೀನ್ ಉಂಟಾಗಿದೆ. ಎರಡು ಬಾರಿ ಶಸ್ತ್ರ ಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.