ನವದೆಹಲಿ: 20 ವರ್ಷದ ಮಹಿಳೆಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ತಲೆಗೂದಲು ಕತ್ತರಿಸಿ, ಮುಖಕ್ಕೆ ಮಸಿ ಬಳಿದು ಕುತ್ತಿಗೆಗೆ ಶೂ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಪೂರ್ವ ದೆಹಲಿ ಕಸ್ತೂರ್ಬಾ ನಗರದ ಬೀದಿಗಳಲ್ಲಿ ಆಕೆಯ ಮೆರವಣಿಗೆ ನಡೆಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ. ಮಹಿಳೆ ಆನಂದ್ ವಿಹಾರ್ ನಲ್ಲಿರುವ ತನ್ನ ಗಂಡನ ಮನೆಯಲ್ಲಿದ್ದ ಸಂದರ್ಭದಲ್ಲಿ ಕಸ್ತೂರಬಾ ನಗರದಲ್ಲಿನ ಆಕೆಯ ತಾಯಿ ಮನೆ ಬಳಿ ವಾಸಿಸುತ್ತಿದ್ದ ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,
ಘಟನೆಯು ವೈಯಕ್ತಿಕ ದ್ವೇಷದ ಪರಿಣಾಮವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳ ಕುಟುಂಬಕ್ಕೆ ಸೇರಿದ ಹುಡುಗ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದರು.
ಕಳೆದ ವರ್ಷ ನವೆಂಬರ್‌ನಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಕುಟುಂಬದವರು ಇದಕ್ಕೆ ಸಂತ್ರಸ್ತೆಯೇ ಕಾರಣ ಎಂದು ದೂಷಿಸುತ್ತಿದ್ದಾರೆ. ಆಕೆಯ ಕಾರಣದಿಂದಾಗಿಯೇ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಅಪಹರಿಸಿ ಬುದ್ಧಿ ಕಲಿಸಲು ಹೀಗೆ ಪೈಶಾಚಿಕ ಕೃತ್ಯವೆಸಗಿದ್ದಾರೆನ್ನಲಾಗಿದೆ.
ನಾವು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಒಂದೇ ಕುಟುಂಬದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಸಂತ್ರಸ್ತೆಗೆ ಕೌನ್ಸೆಲಿಂಗ್ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ ಎಂದು ಡಿಸಿಪಿ(ಶಹದಾರ) ಆರ್. ಸತ್ಯಸುಂದರಂ ಹೇಳಿದ್ದಾರೆ.
ಮಹಿಳೆ ಮೇಲಿನ ದಾಳಿ ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಅಪರಾಧಿಗಳಿಗೆ ಇಷ್ಟು ಧೈರ್ಯ ಹೇಗೆ ಬಂತು? ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಗಮನಹರಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಗೃಹ ಸಚಿವರು ಮತ್ತು ಎಲ್‌ಜಿ ಅವರನ್ನು ಕೋರುತ್ತೇನೆ. ದೆಹಲಿಯ ಜನ ಇಂತಹ ಘೋರ ಅಪರಾಧ ಮತ್ತು ಅಪರಾಧಿಗಳನ್ನು ಸಹಿಸುವುದಿಲ್ಲ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಹಿಳೆಯ ಮೆರವಣಿಗೆ ಮಾಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿರುವುದಾಗಿ ದೆಹಲಿ ಮಹಿಳಾ ಆಯೋಗ ತಿಳಿಸಿದೆ.
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಯ ತಲೆ ಬೋಳಿಸಿ, ಚಪ್ಪಲಿಯಿಂದ ಮಾಲೆ ಹಾಕಿ, ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ನಾನು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ, ಮಹಿಳೆಯರು ಸೇರಿದಂತೆ ಎಲ್ಲಾ ಅಪರಾಧಿಗಳನ್ನು ಬಂಧಿಸಬೇಕು. ಮಹಿಳೆ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ. ಅವರು ಯುವತಿಯನ್ನು ಭೇಟಿಯಾಗಿದ್ದು, ಆಕೆಯ ದೇಹದಾದ್ಯಂತ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ತನ್ನ ತಾಯಿಯ ಮನೆಯ ಸಮೀಪ ವಾಸಿಸುವ ಪರಿಚಯಸ್ಥರೇ ನನ್ನನ್ನು ಅಪಹರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಆಕೆಯನ್ನು ತಮ್ಮ ಮನೆಗೆ ಕರೆದೊಯ್ದು ಆರೋಪಿಗಳು ಥಳಿಸಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕೂದಲನ್ನು ಕತ್ತರಿಸಿ, ಬಲವಂತವಾಗಿ ಚಪ್ಪಲಿ ಹಾರ ಹಾಕಿದ್ದಾರೆ. ನಂತರ ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಮಹಿಳೆ ಆರೋಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.