ನವದೆಹಲಿ: ಎರಡು ಕುಟುಂಬಗಳ ನಡುವಿನ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ ವಿಶಿಷ್ಟವಾದ ತೀರ್ಪು ಪ್ರಕಟಿಸಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಆರಂಭವಾಗಿ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕುಟುಂಬಗಳಿಗೆ ತಲಾ 200 ಗಿಡಗಳನ್ನು ನೆಟ್ಟು 5 ವರ್ಷಗಳ ಕಾಲ ಅವುಗಳನ್ನು ಪೋಷಣೆ ಮಾಡುವಂತೆ ತೀರ್ಪು ನೀಡಿದೆ.
ರಾಜಕೀಯ ಪಕ್ಷಗಳ ಯೋಜನೆಯಡಿ ಕಂಬಳಿ ವಿತರಣೆ ಮಾಡಿದ್ದ ವಿಚಾರವಾಗಿ ಕಂಬಳಿ ಪಡೆಯಲು ಎರಡು ಕುಟುಂಬಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಪರಸ್ಪರ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 6 ವರ್ಷಗಳ ಹಿಂದೆ ನಡೆದಿದ್ದ ಈ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಎರಡೂ ಕುಟುಂಬಗಳ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಪ್ರಕರಣ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದಾಗಿದ್ದು, ಎರಡೂ ಕುಟುಂಬಗಳ ಸದಸ್ಯರು ತಮ್ಮ ತಮ್ಮ ಪ್ರದೇಶದಲ್ಲಿ ತಲಾ 200 ಸಸಿಯಂತೆ ಒಟ್ಟು 400 ಸಸಿಗಳನ್ನು ನೆಟ್ಟು ನಕಾರಾತ್ಮಕತೆಯನ್ನು ಕೊನೆಗಾಣಿಸಬೇಕು. ಹೀಗೆ ನೆಟ್ಟ ಗಿಡಗಳನ್ನು 5 ವರ್ಷಗಳ ಕಾಲ ಪೋಷಣೆ ಮಾದಬೇಕು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ನೇತೃತ್ವದ ಪೀಠ ತೀರ್ಪು ನೀಡಿದೆ.