ನವದೆಹಲಿ: ಹೊರ ರಾಜ್ಯದವರು ಎನ್ನುವ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಚಿಕಿತ್ಸೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಗುರುತಿನ ಚೀಟಿಗೆ ಒತ್ತಾಯಿಸದೆ ಎಲ್ಲರಿಗೂ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಉಚಿತ ಎಂಆರ್‌ಐ ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಬಿಹಾರದ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರ ಏಕ ಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆದು ಆದೇಶ ನೀಡಲಾಗಿದೆ.
ಆಸ್ಪತ್ರೆಯವರು ಮತದಾರರ ಗುರುತಿನ ಚೀಟಿ ಕೊಡುವಂತೆ ರೋಗಿಗಳಿಗೆ ಒತ್ತಾಯಿಸುವಂತಿಲ್ಲ. ಏಮ್ಸ್ ಸೇರಿದಂತೆ ದೆಹಲಿಯ ಯಾವುದೇ ಆಸ್ಪತ್ರೆಯವರು ಹೊರ ರಾಜ್ಯಗಳಿಂದ ಬಂದ ನಾಗರೀಕರಿಗೆ ಚಿಕಿತ್ಸೆ ನಿರಾಕರಿಸದೇ ವಾಸಸ್ಥಾನ ಪರಿಗಣಿಸದೇ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.