ನವದೆಹಲಿ: ಸಲಿಂಗಕಾಮಕ್ಕೆ ಮಾತ್ರ ಸಮ್ಮತಿ ಇದೆ. ಸಲಿಂಗಿಗಳ ಮದುವೆಗೆ ಸಮ್ಮತಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿ.ಎನ್. ಜ್ಯೋತಿ ಸಿಂಗ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದಿದ್ದು, ಜೈವಿಕ ಬದಲಾವಣೆಗಳಿಂದ ಸಲಿಂಗರತಿ ಎಲ್ಲೆಡೆ ಕಂಡು ಬರುತ್ತಿರುವುದರಿಂದ ಸಲಿಂಗಿಗಳ ಮದುವೆಗೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆದಿದೆ.
ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪರಿಚ್ಛೇದ 377ರ ಅಡಿಯಲ್ಲಿ ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಲಾಗಿದೆ. ಆದರೆ ಇದೇ ಪರಿಚ್ಛೇದ ಸಲಿಂಗಿಗಳ ಮದುವೆಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸಲಿಂಗಕಾಮಕ್ಕೆ ಮಾತ್ರವೇ ಈ ಪ್ರಕರಣದಲ್ಲಿ ಅನುಮತಿ ಇದೆ. ಈಗಿನ ಕಾನೂನುಗಳ ಪ್ರಕಾರ ಸಲಿಂಗಿಗಳ ಮದುವೆಗೆ ಅವಕಾಶವಿಲ್ಲ. ಭಾರತೀಯ ಕಾನೂನುಗಳ ಅನ್ವಯ ಜೈವಿಕ ಪುರುಷ ಮತ್ತು ಜೈವಿಕ ಮಹಿಳೆ ನಡುವಿನ ವಿವಾಹ ಸಂಬಂಧಕ್ಕೆ ಮಾತ್ರ ಅನುಮತಿ ಇದೆ ಎಂದು ಹೇಳಲಾಗಿದೆ.
ಸಲಿಂಗ ಮದುವೆಯನ್ನು ಮಾನ್ಯವೆಂದು ಪರಿಗಣಿಸುವಂತೆ ಕೋರಿ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಸಲಿಂಗಿಗಳ ನಡುವಿನ ಸಂಬಂಧವನ್ನು ಮಾನ್ಯ ಮಾಡುವಂತೆ ಕೋರಲಾಗಿದೆ. ಈ ಅರ್ಜಿಗಳನ್ನು ಪುರಸ್ಕರಿಸದಂತೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ನವೆಂಬರ್ 30 ಕ್ಕೆ ಮುಂದೂಡಲಾಗಿದೆ.