ಕ್ರೀಡಾ ಸಂಸ್ಥೆಗಳ ಆಡಳಿತಗಳಲ್ಲಿ ನಡೆಯುವ ಹೊಲಸು ರಾಜಕಾರಣದಿಂದ ಪ್ರತಿಭಾವಂತ ಆಟಗಾರರ ಮೇಲೆ ಏನೆಲ್ಲಾ ಆಗುತ್ತದೆ ಎಂಬ ಮತ್ತೊಂದು ನಿದರ್ಶನ ಇದು.
ಮಾರ್ಚ್ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದ್ದು ಕಂಡು ಬಂದ ಬಳಿಕ ದೆಹಲಿ ಹೈಕೋರ್ಟ್ ಆರು ತಿಂಗಳ ಕಾಲ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್ಐ) ಕಾರ್ಯಕಾರಿ ಸಮಿತಿಯನ್ನು ಅಮಾನತುಗೊಳಿಸಿದೆ
69ರ ಹರೆಯದಲ್ಲೂ ಅದ್ಭುತವಾಗಿ ಟೇಬಲ್ ಟೆನಿಸ್ ಆಡ್ತಾರೆ ಇವರು
ಕಾಮನ್ವೆಲ್ತ್ ಚಿನ್ನದ ಪದಕ ವಿಜೇತೆ ಹಾಗೂ ಖೇಲ್ ರತ್ನ ಪುರಸ್ಕೃತೆ ಮಣಿಕಾ ಬಾತ್ರಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ರೇಖಾ ಪಳ್ಳಿ, ಮ್ಯಾಚ್ ಫಿಕ್ಸಿಂಗ್ ಆಪಾದನೆ ಸಂಬಂಧ ತನಿಖೆ ನಡೆಸಲು ಮೂವರು ಸದಸ್ಯರು ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ. ಟಿಟಿಎಫ್ಐ ಆಟಗಾರರ ಹಿತಾಸಕ್ತಿಗಳ ಬದಲಿಗೆ ತನ್ನ ಅಧಿಕಾರಿಗಳ ಹಿತಾಸಕ್ತಿಯ ಮೇಲೇ ಹೆಚ್ಚಿನ ಗಮನ ಹೊಂದಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ದೇಶವು ತನ್ನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ ನ್ಯಾಯಾಧೀಶರು, ಆಟಗಾರರನ್ನು ಅರ್ಥ ಮಾಡಿಕೊಳ್ಳದ ಜನರನ್ನು ಕ್ರೀಡಾಳಿತಗಳಿಂದ ಹೊರ ಹಾಕಬೇಕು ಎಂದಿದ್ದಾರೆ.
ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ಸ್ನಿಂದ ಹೊರಹಾಕಲ್ಪಟ್ಟ ಬಾತ್ರಾ, ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದು, ರಾಷ್ಟ್ರೀಯ ಕೋಚ್ ಸೌಮ್ಯದೀಪ್ ರಾಯ್ ಒಲಿಂಪಿಕ್ ಅರ್ಹತಾ ಪಂದ್ಯವನ್ನು ತಮ್ಮ ಬಳಿ ತರಬೇತಿ ಪಡೆದವರೊಬ್ಬರ ಎದುರು ಸೋಲುವಂತೆ ಒತ್ತಡ ಹಾಕಿದ್ದರು ಎಂದು ಆಪಾದಿಸಿದ್ದರು.
ಟಿಟಿಎಫ್ಐನ ವರ್ತನೆಯು ಮೇಲುನೋಟಕ್ಕೆ ಖಂಡನಾರ್ಹವಾಗಿ ಕಾಣುತ್ತಿದ್ದು, ರಾಷ್ಟ್ರೀಯ ಕೋಚ್ರನ್ನು ಹಿತಾಸಕ್ತಿಗಳ ಘರ್ಷಣೆಗಳ ನಡುವೆಯೂ ನೇಮಕ ಮಾಡಲಾಗಿದ್ದು, ಈ ಸಂಬಂಧ ತನಿಖೆ ನಡೆಯಬೇಕೆಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಖಾಸಗಿ ಅಕಾಡೆಮಿ ನಡೆಸುತ್ತಿರುವ ಕೋಚ್ ಅನ್ನು ನೇಮಕ ಮಾಡಿದ್ದೀರಿ. ಏನಾಗುತ್ತಿದೆ ? ತಮ್ಮದೇ ಹೆಸರಿನಲ್ಲಿ ಕೋಚಿಂಗ್ ಅಕಾಡೆಮಿ ನಡೆಸುತ್ತಿರುವ ವ್ಯಕ್ತಿಯನ್ನು ರಾಷ್ಟ್ರೀಯ ಕೋಚ್ ಆಗಿ ಮಾಡಿದ್ದೀರಿ ಹಾಗೂ ಆತ ಆಕೆಗೆ ಪಂದ್ಯ ಸೋಲಲು ಹೇಳುತ್ತಿದ್ದಾರೆ ಎಂದು ಹೇಳಿದ ಪಳ್ಳಿ, ವ್ಯವಸ್ಥೆಯಲ್ಲಿನ ಹುಳುಕು ಹೊರ ಬರಬೇಕು ಎಂದಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ಕ್ರೀಡಾ ನೀತಿಗಳ ಅನುಸಾರ ಟಿಟಿಎಫ್ಐ ವಿರುದ್ಧ ತನಿಖೆ ನಡೆಸಲು ಸಾಕ್ಷ್ಯಗಳಿದ್ದು, ತನಿಖೆ ನಡೆಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸಿದಲ್ಲಿ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.
ರಾಯ್ ತಮ್ಮ ವೈಯಕ್ತಿಕ ವಿದ್ಯಾರ್ಥಿನಿ ಶ್ರೀತೀರ್ಥ ಮುಖರ್ಜಿ ಎದುರಿನ ಪಂದ್ಯ ಸೋಲುವಂತೆ ತಮ್ಮ ಮೇಲೆ ಒತ್ತಡ ಹಾಕಿದ್ದರು ಎಂದು ಆಪಾದಿಸಿ ಮಣಿಕಾ ಬಾತ್ರಾ ಕಳೆದ ಸೆಪ್ಟೆಂಬರ್ನಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು 25ನೇ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಆಡಲು ಆಯ್ಕೆ ಮಾಡದೇ ಇದ್ದ ಬಳಿಕ ಮಣಿಕಾ ಬಾತ್ರಾ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದರು.
ಪ್ರಕರಣ ಸಂಬಂಧ ಮುಂದಿನ ಆಲಿಕೆ ಏಪ್ರಿಲ್ 13ಕ್ಕೆ ಇದ್ದು, ಒಂದು ವಾರದೊಳಗೆ ಟಿಟಿಎಫ್ಐಗೆ ಆಡಳಿತಗಾರರನ್ನು ನೇಮಕ ಮಾಡಲು ಕೋರ್ಟ್ ಆದೇಶಿಸಿದೆ.