ನವದೆಹಲಿ: ದೆಹಲಿ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ, ಇ – ರಿಕ್ಷಾ ಚಾಲಕರಿಗೆ 5,000 ರೂ. ಆರ್ಥಿಕ ನೆರವು ನೀಡಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುವಂತೆ ಒಂದು ಬಾರಿ ಹಣಕಾಸಿನ ನೆರವು ನೀಡುವ ಯೋಜನೆಯನ್ನು ವಿಸ್ತರಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರತಿ ಪ್ಯಾರಾ ಟ್ರಾನ್ಸಿಟ್ ವಾಹನ ಚಾಲಕರಿಗೆ 5,000 ರೂ ನೆರವು ನೀಡಿದ್ದು, 1.55 ಲಕ್ಷಕ್ಕೂ ಹೆಚ್ಚು ಜನರಿಗೆ ಸೌಲಭ್ಯ ಸಿಗಲಿದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಪ್ರಸ್ತುತ 2.80 ಲಕ್ಷ ಪಿ.ಎಸ್.ವಿ. ಬ್ಯಾಡ್ಜ್ ಹೊಂದಿದವರು ಮತ್ತು 1.90 ಲಕ್ಷ ಪರ್ಮಿಟ್ ಅವರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಫೆಬ್ರವರಿ 1, 2020 ರಂತೆ ಮಾನ್ಯವಾದ ಪಿ.ಎಸ್.ವಿ. ಬ್ಯಾಡ್ಜ್ ಹೊಂದಿದವರು ಆರ್ಥಿಕ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ.