ದೆಹಲಿಯಲ್ಲಿ ಇನ್ನು ಮುಂದೆ ರಾತ್ರಿ ವೇಳೆಯಲ್ಲೂ ವಾಹನ ಚಾಲನಾ ಪರೀಕ್ಷೆಗಳು ನಡೆಯುತ್ತವೆ. ಇದಕ್ಕೆಂದು ಅಲ್ಲಿನ ಸರ್ಕಾರ 3 ಸ್ವಯಂಚಾಲಿತ ಟ್ರ್ಯಾಕ್ ಗಳನ್ನು ಆರಂಭಿಸಿದೆ. ಮಯೂರ್ ವಿಹಾರ, ಶಾಕುರ್ ಬಸ್ತಿ ಮತ್ತು ವಿಶ್ವಾಸ್ ನಗರ ಪ್ರದೇಶದಲ್ಲಿ ಈ ಮೂರು ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಟ್ರ್ಯಾಕ್ ಗಳು ಆರಂಭವಾಗಿವೆ.
ಉದ್ಯೋಗಸ್ಥರಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಜನರು ಹಗಲಿನ ವೇಳೆ ವಾಹನ ಚಾಲನಾ ಪರವಾನಗಿಗಾಗಿ ಕಾಯುತ್ತಾ ಕುಳಿತುಕೊಂಡು ತಮ್ಮ ಕಚೇರಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದನ್ನು ಈ ವ್ಯವಸ್ಥೆ ತಪ್ಪಿಸಲಿದೆ. ಇನ್ನು ಮುಂದೆ ರಾತ್ರಿ ವೇಳೆಯಲ್ಲೂ ಈ ಮೂರು ಸ್ಥಳಗಳಲ್ಲಿ ವಾಹನ ಚಾಲನಾ ಪರೀಕ್ಷೆಗೆ ಹಾಜರಾಗಿ ಚಾಲನಾ ಪರವಾನಗಿಯನ್ನು ಪಡೆದುಕೊಳ್ಳಬಹುದಾಗಿದೆ.
ಈ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಟ್ರ್ಯಾಕ್ ಗಳು ಸಂಜೆ 5 ಗಂಟೆಯಿಂದ ರಾತ್ರಿ 7 ರವರೆಗೆ ಕಾರ್ಯ ನಿರ್ವಹಿಸುತ್ತವೆ. ಪ್ರತಿ ಟ್ರ್ಯಾಕ್ ನಲ್ಲಿ ಪ್ರತಿದಿನ 45 ಪರೀಕ್ಷೆಗಳಿಗೆ ಮಾತ್ರ ಅವಕಾಶವಿರುತ್ತದೆ.