ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿ ಹುತಾತ್ಮರಾದ ಗಾಯತ್ರಿ ಶರ್ಮಾ ಎಂಬ ನರ್ಸ್‌ಗೆ ದೆಹಲಿ ಸರ್ಕಾರ ಒಂದು ಕೋಟಿ ರೂ. ಗಳ ಗೌರವ ಧನ ನೀಡಿ ಪುರಸ್ಕರಿಸಿದೆ.
ಇಲ್ಲಿನ ಜಿಟಿಬಿ ಆಸ್ಪತ್ರೆಯಲ್ಲಿ 1998 ರಿಂದ ನರ್ಸ್ ಆಗಿದ್ದ ಗಾಯತ್ರಿ 2024 ರಲ್ಲಿ ನಿವೃತ್ತರಾಗುವವರಿದ್ದರು. ಸಾಂಕ್ರಮಿಕದ ವೇಳೆ ಗಾಯತ್ರಿ ಘಾಜ಼ಿಪುರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಶರ್ಮಾರ ಕುಟುಂಬಸ್ಥರನ್ನು ಭೇಟಿಯಾಗಿ ಸಂತಾಪ ಸೂಚಿಸಿದ್ದಾರೆ.
“ಗಾಯತ್ರಿ ಆರೋಗ್ಯ ಇಲಾಖೆಯಲ್ಲಿ ತಮ್ಮ ಸೇವಾವಧಿಯ ವೇಳೆ ಜನಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಅವರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೇಜ್ರಿವಾಲ್ ಸರ್ಕಾರದ ಈ ಗೌರವ ಕೊರೋನಾ ಯೋಧರು ಮಾಡಿದ ತ್ಯಾಗಕ್ಕೊಂದು ನಮನವಾಗಿದೆ,” ಎಂದು ಭಾರದ್ವಾಜ್ ತಿಳಿಸಿದ್ದಾರೆ.
ದೇಶಾದ್ಯಂತ ಮೊದಲನೇ ಅಲೆಗಿಂತ ಭಾರೀ ದೊಡ್ಡ ಮಟ್ಟದಲ್ಲಿ ಭೀತಿ ಮೂಡಿಸಿದ್ದ ಎರಡನೇ ಅಲೆಯ ವೇಳೆ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಗಾಯತ್ರಿ ಹುತಾತ್ಮರಾಗಿದ್ದರು.