ನವದೆಹಲಿ: ಯಮುನಾ ನದಿ ಪ್ರವಾಹದ ಕಾರಣ ದೆಹಲಿಯಲ್ಲಿ ಜುಲೈ 18 ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ರೂ. ನೆರವು ಘೋಷಿಸಲಾಗಿದೆ.
ಯಮುನಾ ನದಿಯ ನೀರಿನ ಮಟ್ಟವು ಭಾನುವಾರ ಇಳಿಮುಖವಾಗಿದ್ದರೂ, ನದಿಯ ಗಡಿಯಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಜುಲೈ 17 ಮತ್ತು 18 ರಂದು ಮುಚ್ಚಲ್ಪಡುತ್ತವೆ ಎಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ಪ್ರವಾಹ ಪರಿಸ್ಥಿತಿಯ ನಡುವೆ ತಾತ್ಕಾಲಿಕವಾಗಿ ತಮ್ಮ ಮನೆಗಳನ್ನು ತೊರೆಯಬೇಕಾದ ಪ್ರತಿ ಕುಟುಂಬಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 10,000 ರೂಪಾಯಿ ಆರ್ಥಿಕ ನೆರವು ಘೋಷಿಸಿದರು.
ಯಮುನಾ ನದಿಯ ಗಡಿಯಲ್ಲಿರುವ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಪ್ರವಾಹ ಪರಿಹಾರ ಶಿಬಿರಗಳನ್ನು ಆರಂಭಿಸಿರುವುದರಿಂದ ಪೀಡಿತ ಜಿಲ್ಲೆಗಳಾದ ಪೂರ್ವ, ಈಶಾನ್ಯ, ವಾಯುವ್ಯ-ಎ, ಉತ್ತರ, ಮಧ್ಯ ಮತ್ತು ದಕ್ಷಿಣ ಪೂರ್ವ ಪ್ರದೇಶದಲ್ಲಿ ಜುಲೈ 17 ಮತ್ತು 18 ರಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ. ಸಂಕಷ್ಟದಲ್ಲಿರುವ ಜನರಿಗಾಗಿ ನಾವು ವಿವಿಧ ಪ್ರದೇಶಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆದಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ಹಲವಾರು ಜನರು ಆಧಾರ್‌ನಂತಹ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ನಂತರ ಈ ಜನರಿಗಾಗಿ ವಿಶೇಷ ಶಿಬಿರವನ್ನು ಸ್ಥಾಪಿಸಲಾಗುವುದು. ವಸ್ತುಗಳನ್ನು ಕಳೆದುಕೊಂಡ ಮಕ್ಕಳಿಗೆ ನಾವು ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ನೀಡುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.