ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆದಿದೆ. ಧರಣಿ ಸ್ಥಳ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ರೈತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆದರೆ ಸ್ಥಳೀಯರ ಹೆಸರಿನಲ್ಲಿ ಹೊರಗಿನವರು ದೊಣ್ಣೆಗಳನ್ನು ಹಿಡಿದು ರೈತರ ಮೇಲೆ ಎರಗಿದ್ದಾರೆ ಎನ್ನಲಾಗಿದ್ದು, ಅವರನ್ನು ತಡೆಯಲು ಪೊಲೀಸರು ಮುಂದಾದಾಗ ಪೊಲೀಸರ ಮೇಲೆಯೇ ಖಡ್ಗದಿಂದ ದಾಳಿ ನಡೆಸಲಾಗಿದೆ. ಅಲಿಪುರ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಸೇರಿ ಹಲವರು ಗಾಯಗೊಂಡಿದ್ದು, ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೋರಾಟದ ಸ್ಥಳದಿಂದ ತೆರವು ಮಾಡುವಂತೆ ಒತ್ತಾಯಿಸಿ ದೊಣ್ಣೆ, ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಗುಂಪು ರೈತರ ಮೇಲೆರಗಿದೆ. ಪೊಲೀಸರ ಮೇಲೆ ದಾಳಿ ಮಾಡಿದೆ. ಸಂಘರ್ಷದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಇದರ ನಡುವೆಯೇ ಮಹಾ ಪಂಚಾಯತ್ ರೈತರ ಸಭೆ ನಡೆದಿದ್ದು, ಸಿಂಘು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಹೋರಾಟಕ್ಕೆ ತೆರಳುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಒಂದೇ ಸಲಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಹೋರಾಟದ ಸ್ಥಳಕ್ಕೆ ತೆರಳಿದರೆ ಸಮಸ್ಯೆಯಾಗಲಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಧರಣಿ ಸ್ಥಳಕ್ಕೆ ತೆರಳಲಾಗುವುದು. ಇಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ರೈತರ ರಣಕಹಳೆ ಮೊಳಗಲಿದೆ.