
ದೆಹಲಿಯ ವಸಂತ್ ಕುಂಜ್ ನಲ್ಲಿ ನಡೆದಿರುವ ಘಟನೆಯಲ್ಲಿ ಮೃತರನ್ನು 46 ವರ್ಷದ ವ್ಯಕ್ತಿ ಹೀರಾಲಾಲ್ ಶರ್ಮಾ ಅವರ ಪುತ್ರಿಯರಾದ ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಶುಕ್ರವಾರ ಮೂರು ಅಂತಸ್ತಿನ ಕಟ್ಟಡದಲ್ಲಿ ಬಾಡಿಗೆಗೆ ಪಡೆದಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವಗಳು ಪತ್ತೆಯಾಗಿವೆ.
ಮಂಗಳವಾರದಂದು ಸೆರೆಯಾಗಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಎಂದು ಹೇಳಲಾಗುತ್ತಿದ್ದು, ಅಂದೇ ನೆರೆಹೊರೆಯವರು ಮೃತ ಕುಟುಂಬವನ್ನು ಕೊನೆಯದಾಗಿ ನೋಡಿದ್ದರೆಂದು ಹೇಳುತ್ತಿದ್ದಾರೆ. ಹೀರಾಲಾಲ್ ಶರ್ಮಾ ಅವರು ಸುಮಾರು 28 ವರ್ಷಗಳ ಕಾಲ ಕಾರ್ಪೆಂಟರ್ ಆಗಿದ್ದು, ಜನವರಿಯಲ್ಲಿ ಕೆಲಸ ಬಿಟ್ಟಿದ್ದರು. ಅವರ ಹೆಣ್ಣುಮಕ್ಕಳು ಪದವೀಧರರಾಗಿದ್ದರೂ ಅವರಲ್ಲಿ ಇಬ್ಬರು ಅಂಗವಿಕಲರಾಗಿದ್ದರು.
ಘಟನೆಯ ಸಾಕ್ಷ್ಯಾಧಾರಗಳು ಆತ್ಮಹತ್ಯೆಯ ಸುಳಿವು ನೀಡಿದ್ದು ಶರ್ಮಾ ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಸಿಹಿತಿಂಡಿಗಳ ಬಾಕ್ಸ್ ನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಗಳು ತೋರಿಸಿವೆ. ಮಕ್ಕಳಿಗೆ ಸಿಹಿತಿಂಡಿ ಕೊಡುವ ಮೊದಲು ಅದಕ್ಕೆ ವಿಷ ಬೆರೆಸಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಪೊಲೀಸರು ಸಿಹಿತಿಂಡಿಗಳ ಬಾಕ್ಸ್, ಸೆಲ್ಫೋಸ್ ಎಂದು ಶಂಕಿಸಲಾದ ಕೀಟನಾಶಕ ಮತ್ತು ಹಣ್ಣಿನ ರಸವನ್ನು ಹೋಲುವ ಮತ್ತೊಂದು ದ್ರವವನ್ನು ವಶಪಡಿಸಿಕೊಂಡಿದ್ದಾರೆ. ಮೃತರ ದೇಹಕ್ಕೆ ಬೇರೆ ಯಾವುದೇ ಗಾಯಗಳಿಲ್ಲ. ಜ್ಯೂಸ್ ಮತ್ತು ಸಿಹಿ ಎರಡರಲ್ಲೂ ವಿಷ ಬೆರೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಕುಟುಂಬವು ಹೆಚ್ಚಾಗಿ ನೆರೆಹೊರೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಕ್ಯಾನ್ಸರ್‌ನಿಂದ ಆಗಸ್ಟ್ ನಲ್ಲಿ ಶರ್ಮಾ ಅವರ ಪತ್ನಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಕಟ್ಟಡದ ಉಸ್ತುವಾರಿ ಮೋಹನ್ ಸಿಂಗ್ ಅವರು ಶರ್ಮಾ ಅವರ ಬಾಲ್ಕನಿಯಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಶರ್ಮಾ ಅವರ ಮೃತದೇಹ ಒಂದು ಕೊಠಡಿಯಲ್ಲಿ ಪತ್ತೆಯಾಗಿದ್ದರೆ, ಇನ್ನೊಂದು ಕೋಣೆಯಲ್ಲಿ ಅವರ ಪುತ್ರಿಯರ ಶವಗಳು ಪತ್ತೆಯಾಗಿದ್ದವು.