ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಲಾಗಿದೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ಕೇಜ್ರಿವಾಲ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಮದ್ಯ ಹಗರಣದಲ್ಲಿ ಭಾಗಿಯಾದವರೊಂದಿಗೆ ನಿಕಟ ಮತ್ತು ಸತತವಾಗಿ ಕೇಜ್ರಿವಾಲ್ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿತ್ತು.
ಅಬಕಾರಿ ಸಚಿವರಾಗಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿಯಲ್ಲಿ ಮದ್ಯದ ಅಂಗಡಿ ಲೈಸೆನ್ಸ್ ಗಳನ್ನು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದು, ಉದ್ಯಮಿಗಳಿಂದ 338 ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪವಿದೆ.