ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಧ ಆಮ್ ಆದ್ಮಿ ಪಕ್ಷ ತೀವ್ರ ಮುಖಭಂಗ ಅನುಭವಿಸಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಸೋಲನುಭವಿಸಿದ್ದಾರೆ. ನವದೆಹಲಿಯ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಗೆದ್ದು ಬೀಗಿದ್ದಾರೆ. ಇನ್ನು ದೆಹಲಿ ಸಿಎಂ ಆತಿಶಿ ಮರ್ಲೇನಾ ಕೆಲವೇ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಪಲಿತಾಂಶದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಆತಿಶಿ, ದೆಹಲಿ ಜನತೆಯ ತೀರ್ಪು ಒಪ್ಪಿಕೊಳ್ಳುತ್ತೇವೆ. ಬಿಜೆಪಿಗೆ ಗೆಲುವಾಗಿದೆ. ಕಲ್ಕಾಜಿ ಕ್ಷೇತ್ರದ ಜನತೆ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಆದರೆ ಇದು ನನ್ನ ಗೆಲುವು ಸಂಭ್ರಮಿಸುವ ಸಮಯವಲ್ಲ, ಹೋರಾಟವನ್ನು ಮುಂದುವರೆಸುವ ಸಮಯ. ಹಣ ಬಲ, ತೋಳ್ಬಲದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.