ಆಸ್ಪತ್ರೆಗಳಲ್ಲಿ ಆಪರೇಷನ್ ಮಾಡೋದು ಅಂದರೆ ಅದಕ್ಕೆ ಅದರದ್ದೇ ಆದ ಕೊಠಡಿ ಹಾಗೂ ನುರಿತ ವೈದ್ಯರು ಮತ್ತು ಸಲಕರಣೆಗಳ ಅವಶ್ಯಕತೆ ಇರುತ್ತದೆ. ಆದರೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿಶಿಷ್ಠ ಮಾದರಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರೈಸಲಾಗಿದೆ.
ಇಬ್ಬರು ಸ್ಥೂಲಕಾಯದ ರೋಗಿಗಳಿಗೆ ರೋಬೋಟ್ ಮಾರ್ಗದರ್ಶನದಂತೆ ಕೆಲಸ ಮಾಡುವ ವಿಶಿಷ್ಟ ಸಾಧನವನ್ನು ಬಳಸಿ ತೂಕ ಇಳಿಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೊಂದು ವಿಶೇಷ ಅಂದರೆ ಈ ಶಸ್ತ್ರಚಿಕಿತ್ಸೆಯನ್ನು ಲೈವ್ ಆಗಿ ನಡೆಸಲಾಗಿದೆ..!
ಅಂದಹಾಗೆ ಇದು ಭಾರತದ ಮೊಟ್ಟ ಮೊದಲ ತೂಕ ಇಳಿಕೆಯ ಲೈವ್ ರೋಬೋಟ್ ಮಾರ್ಗದರ್ಶನದ ಬ್ಯಾರಿಯಾಟ್ರಿಕ್ ಸರ್ಜರಿಯಾಗಿದೆ ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಸ್ಥೂಲಕಾಯ ವಿರೋಧಿ ಅಭಿಯಾನದ ಭಾಗವಾಗಿ ಸ್ಲೀವ್ ಗ್ಯಾಸ್ಟ್ರೆಕ್ಟಮಿಯ ರೋಬೋಟಿಕ್ ಬ್ಯಾರಿಯಾಟ್ರಿಕ್ ಸರ್ಜರಿಯ ವೇಳೆಯಲ್ಲಿ ಈ ತಂತ್ರಜ್ಞಾನದ ಬಳಕೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
224 ಕೆಜಿ ತೂಕ ಹೊಂದಿದ್ದ 30 ವರ್ಷದ ಪುರುಷ ಹಾಗೂ 133.4 ಕೆಜಿ ತೂಕ ಹೊಂದಿದ್ದ 37 ವರ್ಷದ ಮಹಿಳೆ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ತೂಕದಿಂದಾಗಿ ಇವರಿಬ್ಬರು ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ, ಕೀಲು ನೋವಿನಂತಹ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಈ ಲೈವ್ ಸರ್ಜರಿಯಲ್ಲಿ ಬ್ರಿಟನ್, ಜರ್ಮನಿ, ಫ್ರಾನ್ಸ್, ಸ್ಪೇನ್, ಇಟಲಿ, ಅಮೆರಿಕ, ಮೆಕ್ಸಿಕೋ, ಟರ್ಕಿ ಹಾಗೂ ರಷ್ಯಾದ ವಿವಿಧ ಉನ್ನತ ಸರ್ಜನ್ಗಳು ಭಾಗಿಯಾಗಿದ್ದರು.