ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಮಾರು ಆರು ಶಸ್ತ್ರಸಜ್ಜಿತ ದರೋಡೆಕೋರರು ಪೆಟ್ರೋಲ್ ಪಂಪ್ ನಲ್ಲಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಸುಮಾರು ಆರು ಮಂದಿ ದರೋಡೆಕೋರರು ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಾವಿರಾರು ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪರಾರಿಯಾಗುವ ವೇಳೆ ದುಷ್ಕರ್ಮಿಗಳು ಗನ್ ನಿಂದ ಎರಡು ಗುಂಡು ಹಾರಿಸಿದ್ದಾರೆ.
ಮುಂಡ್ಕಾ ಘೇವ್ರಾ ಮೋಡ್ ಪೆಟ್ರೋಲ್ ಪಂಪ್‌ನಲ್ಲಿ ಮಂಗಳವಾರ (ಅಕ್ಟೋಬರ್ 10) ರಾತ್ರಿ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸುಮಾರು ಆರು ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಪೆಟ್ರೋಲ್ ಪಂಪ್ ಬಳಿ ಬಂದು ನೌಕರನನ್ನು ತನ್ನ ಬೈಕ್‌ಗೆ ಪೆಟ್ರೋಲ್ ತುಂಬಿಸುವಂತೆ ಕೇಳುತ್ತಾರೆ. ಬೈಕ್‌ನ ಹಿಂಬದಿ ಸವಾರ, ಬೈಕ್ ಸವಾರನ ಬ್ಯಾಗ್‌ನಿಂದ ಗನ್ ತೆಗೆದು ನೌಕರನತ್ತ ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾನೆ. ಬಳಿಕ ನಗದು ದೋಚಿ ಪರಾರಿಯಾಗುತ್ತಾರೆ. ಆದರೆ ದುಷ್ಕರ್ಮಿಗಳು ಎಷ್ಟು ಮೊತ್ತದ ನಗದು ದೋಚಿದ್ದಾರೆಂದು ಸ್ಪಷ್ಟವಾಗಿಲ್ಲ.
ಅಪರಾಧ ಎಸಗಿ ಸ್ಥಳದಿಂದ ಪರಾರಿಯಾಗುತ್ತಿದ್ದಾಗ ದುಷ್ಕರ್ಮಿಗಳು ಎರಡು ಬಾರಿ ಗುಂಡು ಹಾರಿಸಿದ್ದಾರೆ. ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಬ್ಯಾರಿಕೇಡ್ ಬಳಸಿ ತಡೆಯಲು ಯತ್ನಿಸಿದ ಪೆಟ್ರೋಲ್ ಪಂಪ್ ನೌಕರನ ಮೇಲೆ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ.
ಪೆಟ್ರೋಲ್ ಬಂಕ್ ನೌಕರರು ಸುರಕ್ಷಿತವಾಗಿದ್ದು, ಸಿಬ್ಬಂದಿಗೆ ಯಾವುದೇ ಗಂಭೀರ ಗಾಯಗಳಾಗಿರುವ ವರದಿಯಾಗಿಲ್ಲ. ತಲೆಗೆ ಬಂದೂಕಿನಿಂದ ಗಾಯಗೊಂಡ ಸಿಬ್ಬಂದಿಯೊಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಪೆಟ್ರೋಲ್ ಪಂಪ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.