ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮೇ 25ರಿಂದ ಜೂನ್ 12ರವರೆಗೂ ವಿದೇಶಕ್ಕೆ ಪ್ರಯಾಣಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಮೇ 25ರಿಂದ ಮೇ 27ರವರೆಗೆ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ತಾವು ಅಬು ಧಾಬಿಗೆ ತೆರಳಬೇಕಿದ್ದು, ಅದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಧೀಶ ಶೈಲೆಂದ್ರ ಮಲಿಕ್ ಅಸ್ತು ಎಂದಿದ್ದಾರೆ. ಇದೇ ವೇಳೆ, ಮೇ 28ರಿಂದ ಜೂನ್ 12ರವರೆಗೂ ಇಟಲಿಯ ಮಿಲನ್‌ಗೆ ತೆರಳಲು ನ್ಯಾಯಾಧೀಶರು ಜಾಕ್ವೆಲಿನ್ ಗೆ ಅನುಮತಿ ನೀಡಿದ್ದಾರೆ.
ಪ್ರಕರಣದಲ್ಲಿ ಆಪಾದಿತೆಯಾಗಿರುವ ಜಾಕ್ವೆಲಿನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ಘಟಕ ಸಲ್ಲಿಸಿದ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ನಡೆಸುತ್ತಿದೆ.
ರೆಲಿಗೇರ್ ಎಂಟರ್‌ಪ್ರೈಸಸ್ ಉತ್ತೇಜಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್‌ಗೆ ವಂಚಿಸಿ ಹಣ ಸುಲಿಗೆ ಮಾಡಿದ ಆಪಾದನೆಯಲ್ಲಿ ಸುಖೇಶ್ ಚಂದ್ರಶೇಖರ್ ವಿರುದ್ಧ ಇಡಿ, ತನಿಖೆ ನಡೆಸುತ್ತಿದ್ದು, ಇದೇ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡಾ ಆರೋಪಿಯಾಗಿದ್ದಾರೆ.