ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ಅಲ್ಲಲ್ಲಿ ರಸ್ತೆ ಕುಸಿದಿದೆ. ಅಲ್ಲಿನ ದ್ವಾರಕಾ ಪ್ರದೇಶದಲ್ಲಿ ಪೊಲೀಸರೊಬ್ಬರು ಕಾರು ಚಾಲನೆ ಮಾಡುತ್ತಿದ್ದ ವೇಳೆಯೇ ಏಕಾಏಕಿ ಕುಸಿದ ರಸ್ತೆಯೊಳಗೆ ಮುಗ್ಗರಿಸಿದೆ.
ಕಾರಿನ ಬಾನೆಟ್ ಭಾಗ ಸೇರಿ ಅರ್ಧದಷ್ಟು ಭಾಗ ರಸ್ತೆಯ ಕೆಳಗಿನ ಸಿಂಕ್ಹೋಲ್ ಒಳಗೆ ಇಳಿದಿದೆ. ನಂತರ ಕ್ರೇನ್ ಸಹಾಯದಿಂದ ಅದನ್ನು ಹೊರತೆಗೆಯಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದ ಕಾನ್‌ಸ್ಟೆಬಲ್ ಅಶ್ವನಿಗೆ ಯಾವುದೇ ಗಾಯಗಳಾಗಿಲ್ಲ, ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಳೆದ ತಿಂಗಳು ಇದೇ ರೀತಿಯ ಘಟನೆ ವರದಿಯಾಗಿದೆ, ಮುಂಬೈನ ವಸತಿ ಸಮುಚ್ಚಯವೊಂದರಲ್ಲಿ ನಿಲ್ಲಿಸಿದ್ದ ಕಾರು ಕಣ್ಮರೆಯಾಗಿತ್ತು.
ಭಾರಿ ಮಳೆಯ ಹಿನ್ನೆಲೆಯಲ್ಲಿ ನೀರಿನಿಂದ ತುಂಬಿದ ಅಂಡರ್‌ಪಾಸ್ ಬಳಿ ಸೆಲ್‌ಫೋನ್‌ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸುತ್ತಿದ್ದ ಯುವಕನೋರ್ವ ನೀರಿಗೆ ಬಿದ್ದಿದ್ದಾನೆ.
ಹಾಗೆಯೇ ಗುರಗಾಂವ್‌ನ ವಸತಿ ಪ್ರದೇಶಗಳಲ್ಲಿ ನೀರಿನಿಂದ ತುಂಬಿದ ರಸ್ತೆಗಳಲ್ಲಿ ಹಾವುಗಳು ಕಾಣಿಸಿಕೊಂಡಿವೆ.