ಯಾವುದೇ ಕಾರಣಗಳನ್ನು ನೀಡದೇ ತಮ್ಮನ್ನು ಪೊಲೀಸ್ ಠಾಣೆಗೆ ಕರೆದಿದ್ದಾರೆ ಎಂದು ಆರೋಪಿಸಿದ ಬಳಿಕ ದೆಹಲಿ ನ್ಯಾಯಾಲಯವು ಈಶಾನ್ಯ ದೆಹಲಿಯ ಸೀಲಾಂಪುರ ಠಾಣೆಯ ಇಬ್ಬರು ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದೆ.
ವಿಶೇಷ ನ್ಯಾಯಾಧೀಶ ಸುನೀಲ್ ಚೌಧರಿ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಪಿಗೆ ಆದೇಶ ನೀಡಿದ್ದಾರೆ. ಪೊಲೀಸರ ನಡವಳಿಕೆಯು ಅರ್ಜಿದಾರರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಿದೆ. ಇವರಿಬ್ಬರು ಪೊಲೀಸ್ ಇಲಾಖೆ ನಿರ್ದೇಶನಗಳನ್ನು ಸರಿಯಾಗಿ ಪಾಲಿಸದೇ ಇರುವುದು ಕೋರ್ಟ್ ಗಮನಕ್ಕೆ ಬಂದಿದೆ ಎಂದು ಸುನೀಲ್ ಚೌಧರಿ ಹೇಳಿದರು.
ಅಕ್ಟೋಬರ್ 31ರಂದು ಪೊಲೀಸ್ ಅಧಿಕಾರಿ ವಿಕಾಸ್ ಕುಮಾರ್ ನಮ್ಮ ಮನೆಗೆ ಭೇಟಿ ನೀಡಿದ್ದರು. ನಿಮ್ಮ ಪತ್ನಿಯನ್ನು ಠಾಣೆಗೆ ಕಳುಹಿಸಿ ಎಂದು ಹೇಳಿದ್ದಾರೆ. ನನ್ನ ಪತ್ನಿ ಠಾಣೆಗೆ ಏಕೆ ಭೇಟಿ ನೀಡಬೇಕು ಎಂಬುದಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅರ್ಜಿದಾರ ದೂರಿದ್ದಾರೆ.
ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿದಾರರ ಪರ ವಕೀಲರು ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಇದೇ ರೀತಿ ಯಾವುದೇ ಕಾರಣ ನೀಡದೇ ಠಾಣೆಗೆ ಆಗಮಿಸುವಂತೆ ಸೂಚನೆ ನೀಡಿ ಭಯ ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.