ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ವಿಶೇಷ ಬಡ್ತಿ ನೀಡಲಾಗಿದೆ. ದೆಹಲಿಯಲ್ಲಿ ವಿಶೇಷ ಬಡ್ತಿ ಪಡೆದ ಮೊದಲ ಪ್ರಕರಣ ಇದಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ತಿಳಿಸಿದ್ದಾರೆ.
ಸೀಮಾ ಡಾಕಾ ಅವರು ಎರಡೂವರೆ ತಿಂಗಳಲ್ಲಿ 76 ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಅವರಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಸಮಯಪುರ್ ಬಾಡ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿರುವ ಸೀಮಾ ಅವರು ದೆಹಲಿ ಮಾತ್ರವಲ್ಲದೆ, ಪಂಜಾಬ್, ಪಶ್ಚಿಮಬಂಗಾಳ ಮೊದಲಾದ ರಾಜ್ಯಗಳಲ್ಲಿ ನಾಪತ್ತೆಯಾದ ಮಕ್ಕಳನ್ನು ಪತ್ತೆ ಮಾಡಿದ್ದಾರೆ. 2018 ರಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕನನ್ನು 2020 ರ ಅಕ್ಟೋಬರ್ ನಲ್ಲಿ ಪಶ್ಚಿಮಬಂಗಾಳದಲ್ಲಿ ರಕ್ಷಿಸಿದ್ದಾರೆ.
ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಯಾವುದೇ ಪೊಲೀಸ್ ಕಾನ್ಸ್ ಟೇಬಲ್ 12 ತಿಂಗಳೊಳಗೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 50 ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಿದಾಗ ವಿಶೇಷ ಬಡ್ತಿ ನೀಡಲಾಗುವುದು. 15 ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಿದರೆ ಅಸಾಧಾರಣ ಕಾರ್ಯ ಪುರಸ್ಕಾರ ನೀಡಲಾಗುವುದು.
2006 ರ ಜುಲೈನಲ್ಲಿ ಪೊಲೀಸ್ ಸೇವೆಗೆ ಸೇರಿದ ಸೀಮಾ ಡಾಕಾ 2014 ರಲ್ಲಿ ಬಡ್ರಿ ಪಡೆದು ಕಾನ್ಸ್ ಟೇಬಲ್ ಆಗಿದ್ದಾರೆ. ಅವರು ಎರಡೂವರೆ ತಿಂಗಳಲ್ಲಿ 76 ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಬಡ್ತಿ ನೀಡಲಾಗಿದೆ.