ನವದೆಹಲಿ: ದೆಹಲಿಯ ಖಾಸಗಿ ಬೇಬಿ ಕೇರ್ ಸೆಂಟರ್ ನಲ್ಲಿ ಬೆಂಕಿ ದುರಂತ ಸಂಭವಿಸಿ 7 ಶಿಶುಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಾಲೀಕ ನವೀನ್ ಕಿಚಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೆಹಲಿ ಪೊಲೀಸರು ನವೀನ್ ಕಿಚಿ ವಿರುದ್ಧ ಐಪಿಸಿ ಸೆಕ್ಷನ್ 336, 304A, 34 ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ನವೀನ್ ಕಿಚು ನಾಪತ್ತೆಯಾಗಿದ್ದು, ಆತನಿಗಾಗಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.
ಪೂರ್ವ ದೆಹಲಿಯ ವಿವೇಕ್ ವಿಹಾರ್ ನಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ತಡರಾತ್ರಿ 11:30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ತುಂಬಾ ಇಕ್ಕಟ್ಟಿನ ಜಾಗದಲ್ಲಿ ಈ ಶಿಶುಪಾಲನಾ ಕೇಂದ್ರ ಕಟ್ಟಡವಿದ್ದು, ಡಾ.ನವೀನ್ ಕಿಚಿ ಎಂಬುವವರು ಇದನ್ನು ನಡೆಸುತ್ತಿದ್ದಾರೆ. ಶಿಶುಪಾಲನಾ ಕೇಂದ್ರದ ಕಟ್ಟಡದಲ್ಲಿಯೇ ಒಂದೆಡೆ ಸಿಲಿಂಡರ್ ರೀಫಿಲ್ಲಿಂಗ್ ಕೂಡ ನವೀನ್ ಕಿಚಿ ನಡೆಸುತ್ತಿದ್ದರು. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಸಿಲಿಂಡರ್ 15-20 ಮೀಟರ್ ದೂರ ಹೋಗಿ ಬಿದ್ದಿವೆ. ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಘಟನೆ ವೇಳೆ ಶಿಶುಪಾಲನಾ ಕೇಂದ್ರದಲ್ಲಿ 12 ಶಿಶುಗಳು ಓರ್ವ ಮಗು ಸೇರಿ 13 ಮಕ್ಕಳಿದ್ದರು. 6 ಶಿಶುಗಳು ಕಟ್ಟಡದ ಒಳಗೆ ಸಜೀವದಹನವಾಗಿದ್ದು, ಓರ್ವ ಮಗು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಉಸಿರು ಚೆಲ್ಲಿದೆ. 6 ಶಿಶುಗಳಿಗೆ ಗಂಭೀರ ಗಾಯಗಳಾಗಿವೆ.