
ನವದೆಹಲಿ: ದೇವರ ಆದೇಶ ಎಂದು ಆರು ವರ್ಷದ ಬಾಲಕನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ ಬಳಿ ಶನಿವಾರ ರಾತ್ರಿ ಘಟನೆ ನಡೆದಿದೆ. ಇಬ್ಬರು ಕಾರ್ಮಿಕರು ಅಲ್ಲೇ ಕೆಲಸ ಮಾಡುತ್ತಿದ್ದ ಕುಟುಂಬದ ಆರು ವರ್ಷದ ಬಾಲಕನ ತಲೆಕಡಿದು ಹತ್ಯೆ ಮಾಡಿದ್ದಾರೆ. ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಮಲಿನಲ್ಲಿ ಕೃತ್ಯವೆಸಗಿದ್ದ ಕಾರ್ಮಿಕರು ಹಾಗೂ ಮೃತ ಬಾಲಕನ ಕುಟುಂಬದವರು ಒಂದೇ ಕಡೆ ವಾಸವಾಗಿದ್ದು, ಪರಿಚಯಸ್ಥರೇ ಆಗಿದ್ದಾರೆ. ದೇವರ ಆದೇಶದಂತೆ ಬಾಲಕನನ್ನು ಹತ್ಯೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಹೇಳಿಕೊಂಡಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಈ ಘಟನೆ ಅಕ್ಟೋಬರ್ 1 ರಂದು ಶನಿವಾರ ರಾತ್ರಿ ಐಷಾರಾಮಿ ಲೋಧಿ ಕಾಲೋನಿ ಪ್ರದೇಶದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಪ್ರಧಾನ ಕಚೇರಿಯ ನಿರ್ಮಾಣ ಸ್ಥಳದಲ್ಲಿ ನಡೆದಿದೆ.
ದೆಹಲಿ ಪೊಲೀಸರಿಗೆ ಭಾನುವಾರ ಮುಂಜಾನೆ ಲೋಧಿ ಕಾಲೋನಿಯಲ್ಲಿ ಪಿಸಿಆರ್ ಕರೆ ಬಂದಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ವ್ಯಕ್ತಿಗಳು 6 ವರ್ಷದ ಬಾಲಕನ ಕತ್ತು ಸೀಳಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲೇ ಕೆಲಸ ಮಾಡಿಕೊಂಡಿದ್ದ ಉತ್ತರ ಪ್ರದೇಶದ ಬರೇಲಿ ಮೂಲದ ಕುಟುಂಬದವರ ಮಗನನ್ನು ಕಾರ್ಮಿಕರು ಹತ್ಯೆ ಮಾಡಿದ್ದಾರೆ.
ಆರೋಪಿಗಳಾದ ವಿಜಯ್ ಕುಮಾರ್ ಮತ್ತು ಅಮನ್ ಕುಮಾರ್ ಇಬ್ಬರೂ ಬಿಹಾರ ಮೂಲದವರಾಗಿದ್ದು, ಅವರೂ ಅಲ್ಲೇ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಮಾದಕದ್ರವ್ಯದ ಅಮಲಿನಲ್ಲಿದ್ದಾಗ ಅವರು ಮಗುವಿನ ಕತ್ತು ಸೀಳಿದ್ದಾರೆ. ವಿಚಾರಿಸಿದಾಗ ದೇವರ ಆದೇಶದಂತೆ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.