ಮುಂಬೈ: 185 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದ ಆಕಾಶ ಏರ್‌ನ ವಿಮಾನವು ಶನಿವಾರ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು, ನಂತರ ಅದು ಸುಳ್ಳು ಎಂದು ಗೊತ್ತಾಗಿ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಪುಣೆಯಿಂದ ಟೇಕ್ ಆಫ್ ಆದ ನಂತರ, ಪಲ್ಲವ್ ಅಜಯ್ ತ್ಯಾಗಿ ಎಂದು ಗುರುತಿಸಲಾದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಬಾಂಬ್ ಇದೆ ಎಂದು ಕೂಗಲು ಪ್ರಾರಂಭಿಸಿದರು, ಇದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕಾಶ ಏರ್ ಫ್ಲೈಟ್ ಕ್ಯೂಪಿ 1148 ಶನಿವಾರ ಪುಣೆಯಿಂದ ದೆಹಲಿಗೆ 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ದಿದೆ, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಲಾಗಿದೆ. ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದರು. ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು ಎಂದು ಏರ್ ಲೈನ್ ವಕ್ತಾರರು ತಿಳಿಸಿದ್ದಾರೆ.
ಸುಳ್ಳು ಹೇಳಿದ್ದಕ್ಕಾಗಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಮಾನ ಲ್ಯಾಂಡ್ ಆದ ನಂತರ ಭದ್ರತಾ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಬಾಂಬ್ ಇದೆ ಎಂದು ಕೂಗಿದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.