ದೆಹಲಿಯ 70 ಸ್ಥಾನಗಳಿಗೆ ಇಂದು (ಫೆಬ್ರವರಿ 5, ಬುಧವಾರ) ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಫೆಬ್ರವರಿ 8 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಪೋಷಕರಾದ ಗೋವಿಂದ್ ರಾಮ್ ಕೇಜ್ರಿವಾಲ್ ಮತ್ತು ಗೀತಾ ದೇವಿ ಅವರೊಂದಿಗೆ ಲೇಡಿ ಇರ್ವಿನ್ ಸೀನಿಯರ್ ಸೆಕೆಂಡರಿ ಶಾಲೆಗೆ ಆಗಮಿಸಿ ಮತ ಚಲಾಯಿಸಿದರು. ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಮತ ಚಲಾಯಿಸಿದರು.
70 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ 699 ಅಭ್ಯರ್ಥಿಗಳ ಭವಿಷ್ಯವನ್ನು 1.56 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಈ ಪೈಕಿ 83.76 ಲಕ್ಷ ಪುರುಷರು, 72.36 ಲಕ್ಷ ಮಹಿಳೆಯರು ಮತ್ತು 1,267 ತೃತೀಯ ಲಿಂಗಿ ಮತದಾರರಿದ್ದಾರೆ.
ವಿಶೇಷವೆಂದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 2015 ಮತ್ತು 2020 ರಲ್ಲಿ ನಡೆದ ಕೊನೆಯ ಎರಡು ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದೆ.