ಬೆಂಗಳೂರು: ಹಳೆ ಪಿಂಚಣಿ ಯೋಜನೆ ಜಾರಿಗೆ ಸಮಿತಿ ರಚನೆಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಸಾಧ್ಯತೆಗಳ ಪರಿಶೀಲನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರ ಆಧ್ಯಕ್ಷತೆಯಲ್ಲಿ 5 ಜನರ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಆರ್ಥಿಕ ಇಲಾಖೆಯ(ವಿತ್ತೀಯ ಸುಧಾರಣೆಗಳು) ಸರ್ಕಾರದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಇವರು ಸಮಿತಿಯ ಸದಸ್ಯರಾಗಿದ್ದು, ಆರ್ಥಿಕ ಇಲಾಖೆಯ(ವೆಚ್ಚ) ಕಾರ್ಯದರ್ಶಿ ಡಾ.ಎಂ.ಟಿ.ರೇಜು ಸಮಿತಿಯ ಸದಸ್ಯ ಕಾರ್ಯರ್ಶಿಯಾಗಿರುತ್ತಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಯ ಮರು ಜಾರಿ ಮಾಡಿದ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವುದರ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.
New Pension Scheme ಯೋಜನೆಯನ್ನು ರದ್ದುಗೊಳಿಸುವ ವಿಷಯದಲ್ಲಿ ಸರ್ಕಾರವು ಮತ್ತೊಮ್ಮೆ ಸಮಿತಿಯನ್ನು ಪುನರ್ ರಚಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ವಿರೋಧಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ನಿರಂತರ ಹೋರಾಟ ನಡೆಸುತ್ತಿದೆ. ಒಪಿಎಸ್ ಜಾರಿಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ತಾವು ಬದ್ಧರಾಗಿರುವುದಾಗಿ ಸಿಎಂ, ಡಿಸಿಎಂ ಭರವಸೆ ನೀಡಿದ್ದರು.
ರಾಜ್ಯ ಸರ್ಕಾರಿ NPS ನೌಕರರು, ನಿಗಮ ಮಂಡಳಿ, ಅನುದಾನಿತ ಸ್ನಾಯತ್ತ ಸಂಸ್ಥೆಗಳ ನೌಕರರು ಸೇರಿದಂತೆ ಸಮಸ್ತ ರಾಜ್ಯ ಸರ್ಕಾರಿ ನೌಕರರು NPS ಯೋಜನೆಯನ್ನು ರದ್ದುಗೊಳಿಸುವ ವಿಷಯವನ್ನು ಸಚಿವ ಸಂಪುಟದ ಮುಂದೆ ತಂದು ಆ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ನಿರೀಕ್ಷಿಸುತ್ತಿದ್ದೆವು.
ಇಂತಹ ಸಂದರ್ಭದಲ್ಲಿ ಮೂರನೇ ಬಾರಿಗೆ ಸಮಿತಿಯನ್ನು ರಚಿಸಿ, NPS ಯೋಜನೆಯನ್ನು ರದ್ದುಗೊಳಿಸುವ ವಿಷಯವನ್ನು ವಿಳಂಬಗೊಳಿಸುತ್ತಿರುವ ಕ್ರಮದಿಂದ ಸಮಸ್ತ ನೌಕರರಿಗೆ ನಿರಾಸೆ ಉಂಟಾಗಿರುತ್ತದೆ. NPS ಯೋಜನೆಯನ್ನು ಈಗಾಗಲೇ ರದ್ದುಗೊಳಿಸಿರುವ ರಾಜಸ್ಥಾನ, ಛತೀಸ್‌ಗಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳು ಯಾವುದೇ ಸಮಿತಿಯನ್ನು ರಚಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ NPS ನೌಕರರ ಸಂಘವು ನಿರ್ಣಾಯಕ ಹೋರಾಟಕ್ಕೆ ಕರೆ ನೀಡುವ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತಿಳಿಸಿದ್ದಾರೆ.